Mandya: ಮದ್ದೂರು: ಕೇಂದ್ರ ಸಚಿವ ಕುಮಾರಸ್ವಾಮಿ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡುವಲ್ಲಿ ಬುದ್ದಿವಂತರು, ಕ್ಷೇತ್ರದ ಅಭಿರುದ್ದಿಯಲ್ಲಿ ಯೋಜನತ್ಮಕ ಕೊಡುಗೆಯಿಲ್ಲ ಎಂದು ಕೃಷಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಗುದ್ದು ನೀಡಿದರು.
ತಾಲೂಕಿನ ಕದಲೂರು ಗ್ರಾಮದಲ್ಲಿನ ಶಾಸಕ ಕದಲೂರು ಉದಯ್. ಕೆ.ಎಂ ನಿವಾಸದಲ್ಲಿ ಸುದ್ಧಿಗಾರರರೊಂದಿಗೆ ಅವರು ಮಾತನಾಡಿದರು. ಕ್ಷೇತ್ರದಲ್ಲಿಯೇ ಇದ್ದು ಅಭಿವೃದ್ಧಿ ಮಾಡುವಂತೆ ಜೆಡಿಎಸ್ ಬೆಂಬಲಿಗರೇ ಹೇಳಿಕೊಳ್ಳುತಿದ್ದಾರೆ. ಕೇಂದ್ರದಲ್ಲಿ ಮಂತ್ರಿಯಾಗುವ ಆಸೆಯಿಂದ ಚನ್ನಪಟ್ಟಣ ಕ್ಷೇತ್ರದ ತ್ಯಾಜಿಸಿ ಮಂಡ್ಯದಲ್ಲಿ ಗೆದ್ದು ಕೇಂದ್ರ ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕುಟುಕಿದರು.
ಅವರ ಮನೆಯೇ ಜೆಡಿಎಸ್ ಗೆ ಕಂಟಕ ಎನ್ನುವ ಮಾತಿದೆ, ಚನ್ನಪಟ್ಟಣದಲ್ಲಿ ಚುನಾವಣೆ ಎದುರಿಸಿ ನಿಖಿಲ್ ಸೋತಿಲ್ಲ, ಒಮ್ಮೆ ರಾಮನಗರ, ಒಮ್ಮೆ ಮಂಡ್ಯದಲ್ಲಿ ನಿಂತು ಸೋತಿದ್ದಾರೆ. ಅವರು ಸ್ಥಳೀಯರು ಅಲ್ಲ ಅನ್ನೋದನ್ನ ಚನ್ನಪಟ್ಟಣ ಜನ ತಿಳಿದಿದ್ದಾರೆ ಎಂದರು.
ಸಿ.ಪಿ.ಯೋಗೇಶ್ವರ್ ಸ್ಥಳೀಯರು, ಚನ್ನಪಟ್ಟಣ ಅಭಿವೃದ್ಧಿಯನ್ನೇ ಜೀವನದ ಗುರಿಯಾಗಿಸಿಕೊಂಡಿದ್ದಾರೆ. ಚನ್ನಪಟ್ಟಣದಲ್ಲಿ ಸ್ಥಳೀಯರನ್ನು ಗೆಲ್ಲಿಸಬೇಕೆ, ಕ್ಷೇತ್ರಬಿಟ್ಟು ಹೋದ ಹೊರಗಿನವರನ್ನು ಗೆಲ್ಲಿಸಬೇಕೆ. ಇದಕ್ಕೆ ಉತ್ತರ ಚನ್ನಪಟ್ಟಣ ನೀಡುವರು ಎಂದು ಹೇಳಿದರು.
ಎರಡು ಬಾರಿ ಸೋತು ಅನ್ಯಾಯವಾಗಿದೆ ಎಂದು ನಿಖಿಲ್ ಹೇಳುತಿದ್ದಾರೆ, ಇವರು ಸೋತದ್ದು ಚನ್ನಪಟ್ಟಣದಲ್ಲಿ ಅಲ್ಲ, ಚನ್ನಪಟ್ಟಣದ ಅಭಿವೃದ್ಧಿಗೆ ನಿಂತ ಯೋಗಿಶ್ವರ್ ಚನ್ನಪಟ್ಟಣದಲ್ಲೇ ಎರಡು ಬಾರಿ ಸೋತಿದ್ದಾರೆ, ಯೋಗಿಶ್ವರ್ ಗೆ ಅನ್ಯಾಯವಾಗಿದೆ. ಯೋಗಿಶ್ವರ್ ಗೆದ್ದು ಮೂರುವರೆ ವರ್ಷಗಳ ಕಾಲ ಚನ್ನಪಟ್ಟಣದ ಅಭಿವೃದ್ಧಿ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಶಾಸಕ ಕದಲೂರು ಉದಯ್. ಕೆ.ಎಂ, ಮನ್ಮುಲ್ ಅಧ್ಯಕ್ಷ ಸಿ. ಡಿ. ಗಂಗಾಧರ್, ಮುಖಂಡರಾದ ಚಿದಂಬರ್, ಕದಲೂರು ರಾಮಕೃಷ್ಣ ಇತರರಿದ್ದರು.