ದೆಹಲಿಯ ಕೆಂಪು ಕೋಟೆಯ ಬಳಿ ನಿನ್ನೆ ಸಂಭವಿಸಿದ ಭೀಕರ ಸ್ಫೋಟದಲ್ಲಿ, 9 ಮಂದಿ ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡಿದ್ದಾರೆ. ಈ ಸ್ಫೋಟ ಸಂಭವಿಸಿರುವ ಕಾರಿನ ಮಾಹಿತಿಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಹರಿಯಾಣ ನೋಂದಣಿ ಹೊಂದಿದ್ದ, HR 26 C 7674 ನಂಬರ್‌ನ ಹುಂಡೈ i20 ಕಾರು ಎಂಬುದನ್ನು ಪತ್ತೆಯಾಗಿದೆ.
2014ರಲ್ಲಿ ಹರಿಯಾಣದ ಗುರುಗ್ರಾಮದ ಶಾಂತಿನಗರದ ವಿಳಾಸದಲ್ಲಿ, ಮೊಹಮ್ಮದ್ ಸಲ್ಮಾನ್ ಎಂಬುವರ ಹೆಸರಿನಲ್ಲಿ ಕಾರು ನೋಂದಣಿಯಾಗಿತ್ತು. ಸಲ್ಮಾನ್ ಅವರು ಒಂದೂವರೆ ವರ್ಷದ ಹಿಂದೆ ದೆಹಲಿಯ ಓಖ್ಲಾ ನಿವಾಸಿ ದೇವೇಂದರ್ ಎಂಬುವವರಿಗೆ, ಈ ಕಾರನ್ನು ಮಾರಾಟ ಮಾಡಿದ್ದಾಗಿ ಹೇಳಿದ್ದಾರೆ.
ಇನ್ನು, ದೇವೇಂದರ್ ಕೂಡ ಕಾರನ್ನು ಜಮ್ಮು-ಕಾಶ್ಮೀರದ ಪುಲ್ವಾಮಾ ಮೂಲದ, ತಾರೀಕ್ ಎಂಬ ವ್ಯಕ್ತಿಗೆ ಮಾರಾಟ ಮಾಡಿದ್ದಾನಂತೆ. ಹೀಗಾಗಿ ಪೊಲೀಸರು ಸಲ್ಮಾನ್ ಮತ್ತು ದೇವೇಂದರ್ ಇಬ್ಬರನ್ನೂ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಕಾರು ಮಾರಾಟವಾದರೂ ಏಕೆ ಮಾಲೀಕತ್ವ ವರ್ಗಾವಣೆಯಾಗಿಲ್ಲ ಎಂಬುದು, ತನಿಖೆಯ ಪ್ರಮುಖ ಅಂಶವಾಗಿದೆ. ಡಾಗ್ ಸ್ಕ್ವಾಡ್ ತಂಡಗಳೂ ಸಹ ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿವೆ. ಸ್ಫೋಟದ ಹಿಂದಿನ ಉದ್ದೇಶ ಮತ್ತು ಇದರ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಪತ್ತೆಹಚ್ಚಲು ತೀವ್ರ ತನಿಖೆ ಮುಂದುವರೆದಿದೆ.
ಈ ಎಲ್ಲಾ ಬೆಳವಣಿಗೆಗಳು ಪ್ರಕರಣಕ್ಕೆ ಪುಲ್ವಾಮಾ ನಂಟು ಹೊಂದಿರುವ ಅನುಮಾನ ವ್ಯಕ್ತವಾಗಿದ್ದು, ಭಾರೀ ಆತಂಕ ಮೂಡಿಸಿದೆ. ಉಗ್ರರ ಕೈವಾಡದ ಬಗ್ಗೆಯೂ ಶಂಕೆ ವ್ಯಕ್ತವಾಗಿದ್ದು, ದೆಹಲಿ ಪೊಲೀಸರ ತಂಡವೊಂದು ತಾರೀಕ್‌ನ ಜಾಡು ಹಿಡಿದು ಪುಲ್ವಾಮಾಗೆ ತೆರಳಿದ್ದಾರೆ. ಎಫ್‌ಎಸ್‌ಎಲ್, ಎನ್‌ಎಸ್‌ಜಿ ಮತ್ತು ಎನ್‌ಐಎ ಅಧಿಕಾರಿಗಳು ಸಹ ತನಿಖೆಯಲ್ಲಿ ತೊಡಗಿಕೊಂಡಿದ್ದಾರೆ.

