ಬೆಂಗಳೂರು : ಕಳೆದ ಅದಿವೇಶನದ ಸಮಯದಲ್ಲಿ ಸ್ಮಾರ್ಟ್ ಮೀಟರ್ ಖರೀದಿಯ ವಿಚಾರದಲ್ಲಿ ರಾಜ್ಯ ಸರ್ಕಾರ ಅವ್ಯವಹಾರ ನಡೆಸಿದೆ ಎಂದು ವಿಪಕ್ಷ ಬಿಜೆಪಿ ಆರೋಪಿಸಿತ್ತು. ಸದನದ ಒಳಗೂ ಹಾಗೂ ಹೊರಗೂ ಕಾಂಗ್ರೆಸ್ ಸರ್ಕಾರದ ಇಂಧನ ಸಚಿವರ ವಿರುದ್ಧ ಹೋರಾಟ ನಡೆಸಿತ್ತು. ಅಲ್ಲದೆ ಲೋಕಾಯುಕ್ತ ಡಿವೈಎಸ್‌ಪಿಗೂ ಬಿಜೆಪಿ ದೂರು ನೀಡಿತ್ತು.
ಆದರೆ ಇದೀಗ ಮತ್ತೆ ಬಿಜೆಪಿ ಶಾಸಕರ ನಿಯೋಗ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ಕಂಪ್ಲೇಂಟ್ ದಾಖಲಿಸಿದ್ದಾರೆ. ಈ ಮೂಲಕ ಹಗರಣವನ್ನು ಇನ್ನಷ್ಟು ಬಯಲಿಗೆ ಎಳೆಯಲು ಮುಂದಾಗಿದೆ. ಶಾಸಕರಾದ ಡಾ. ಸಿ.ಎನ್. ಅಶ್ವತ್ಥನಾರಾಯಣ್, ಎಸ್.ಆರ್. ವಿಶ್ವನಾಥ್ ಸೇರಿದಂತೆ ಧೀರಜ್ ಮುನಿರಾಜು ಕೋರ್ಟ್‌ನಲ್ಲಿ ದೂರು ದಾಖಲಿಸಿದ್ದಾರೆ. ಬಿಜೆಪಿ ನಾಯಕರ ಈ ನಡೆಯಿಂದ ಇದೀಗ ಪವರ್ ಮಿನಿಸ್ಟರ್ ಕೆ.ಜೆ. ಜಾರ್ಜ್‌ಗೆ ಸಂಕಷ್ಟ ಬಂದಂತಾಗಿದೆ.
ಪ್ರಮುಖವಾಗಿ ರಾಜ್ಯ ಸರ್ಕಾರದಿಂದ ಸ್ಮಾರ್ಟ್ ಮೀಟರ್ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆದಿದೆ. ಹಲವಾರು ಕಂಪೆನಿಗಳನ್ನು ಕೈಬಿಟ್ಟು ದಾವಣಗೆರೆಯ ರಾಜಶ್ರೀ ಎಲೆಕ್ಟ್ರಿಕಲ್ಸ್ಗೆ ಗುತ್ತಿಗೆ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಇದೇ ಕಂಪೆನಿಗೆ ಗುತ್ತಿಗೆ ನೀಡುವ ಉದ್ದೇಶದಿಂದ ಇತರೆ ಕಂಪನಿಗಳು ಟೆಂಡರ್‌ನಲ್ಲಿ ಭಾಗವಹಿಸದಂತೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಇನ್ನೂ ಇತರ ರಾಜ್ಯಗಳಲ್ಲಿ 900 ರೂಪಾಯಿಗಳಿಗೆ ಸಿಗುವ ಸ್ಮಾರ್ಟ್ ಮೀಟರ್ ಅನ್ನು 5 ಸಾವಿರದಿಂದ 10 ಸಾವಿರ ರೂಪಾಯಿಗಳಿಗೆ ಗ್ರಾಹಕರಿಗೆ ವಿತರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇದೊಂದು ದೊಡ್ಡ ಹಗರಣವೆಂದು ದೂರುದಾರರ ಪರ ಹಿರಿಯ ವಕೀಲ ಲಕ್ಷ್ಮಿ ಅಯ್ಯಂಗಾರ್ ವಾದಿಸಿದ್ದಾರೆ.
ಇನ್ನೂ ಈ ಇಡೀ ಅವ್ಯವಹಾರದ ಬಗ್ಗೆ ಬಿಜೆಪಿಯು ನೀಡಿರುವ ದೂರನ್ನು ಗಮನಿಸಿದಾಗ, ಸ್ಮಾರ್ಟ್ ಮೀಟರ್ ಟೆಂಡರ್‌ನಲ್ಲಿ ಸುಮಾರು 10 ಸಾವಿರ ಕೋಟಿ ರೂಪಾಯಿ ಮೊತ್ತದ ದೊಡ್ಡ ಟೆಂಡರ್ ಆಗಿದೆ. ಈ ಹಿನ್ನೆಲೆಯಲ್ಲಿ ಇದನ್ನು ಜಾಗತಿಕ ಮಟ್ಟದ ಟೆಂಡರ್ ಆಗಿ ಕರೆಯಬೇಕಿತ್ತು. ಆದರೆ ಅದರ ನಿಯಮಗಳನ್ನು ಪಾಲನೆ ಮಾಡದೆ ಕೇವಲ 354 ಕೋಟಿ ರೂಪಾಯಿ ವ್ಯವಹಾರ ನಡೆಸುವ ರಾಜಶ್ರೀ ಎಲೆಕ್ಟ್ರಿಕಲ್ಸ್ಗೆ ಟೆಂಡರ್ ನೀಡಲಾಗಿದೆ ಎಂದು ದೂರಲಾಗಿದೆ.
ಮುಖ್ಯವಾಗಿ 10 ವರ್ಷಕ್ಕೆ 5,296 ಕೋಟಿ ರೂಪಾಯಿಗೆ ನೀಡಲಾಗಿರುವ ಟೆಂಡರ್ ಅನ್ನು ಉದ್ದೇಶಪೂರ್ವಕವಾಗಿಯೇ 997 ಕೋಟಿ ರೂಪಾಯಿ ಟೆಂಡರ್ ಎಂಬಂತೆ ಬಿಂಬಿಸಿ ರಾಜಶ್ರೀ ಎಲೆಕ್ಟ್ರಿಕಲ್ಸ್ ಕಂಪೆನಿಗೆ ನೀಡಲಾಗಿದೆ. ಬೆಸ್ಕಾಂ ವ್ಯಾಪ್ತಿಗೆ ಮಾತ್ರ ಈ ಟೆಂಡರ್ ಕರೆಯಲಾಗಿದ್ದರೂ ಬೆಸ್ಕಾಂ ಇತರೆ ಎಸ್ಕಾಂಗಳಿಗೂ ಇದೇ ಸ್ಮಾರ್ಟ್ ಮೀಟರ್ ಖರೀದಿಸಿರುವಂತೆ ಸೂಚಿಸಿರುವುದು ಸಂಪೂರ್ಣ ಕಾನೂನುಬಾಹಿರ ಹಾಗೂ ಅಕ್ರಮವಾಗಿದೆ ಎಂದು ಆರೋಪಿಸಲಾಗಿದೆ.
ಇನ್ನೂ ಕೇಂದ್ರ ಸರ್ಕಾರದ ಆರ್‌ಡಿಎಸ್‌ಎಸ್ ಯೋಜನೆಯಡಿ 900 ರೂಪಾಯಿಗೆ ದೊರೆಯುವ ಮೀಟರ್ ಅನ್ನು 5 ಸಾವಿರದಿಂದ 8,800 ರೂಪಾಯಿಗಳಿಗೆ ಖರೀದಿಸಬೇಕಾದ ಅನಿವಾರ್ಯತೆಗೆ ಗ್ರಾಹಕರನ್ನು ತಳ್ಳಿದ್ದಾರೆ. ಇದಕ್ಕೆಲ್ಲಾ ಬೆಸ್ಕಾಂ ಅಧ್ಯಕ್ಷ ಹಾಗೂ ಇಂಧನ ಸಚಿವ ಕೆ.ಜೆ.ಜಾರ್ಜ್ ಹಾಗೂ ಇತರೆ ಅಧಿಕಾರಿಗಳೇ ಹೊಣೆಯಾಗಿದ್ದಾರೆ. ಈ ಎಲ್ಲ ಕಾರಣಗಳಿಗಾಗಿ ತನಿಖೆಯ ಅನುಮತಿಗಾಗಿ ರಾಜ್ಯಪಾಲರಿಗೂ ಮನವಿ ಸಲ್ಲಿಸಲಾಗಿದೆ. ಲೋಕಾಯುಕ್ತ ಡಿವೈಎಸ್‌ಪಿ ಗೆ ದೂರು ನೀಡಿದರೂ ಎಫ್‌ಐಆರ್ ದಾಖಲಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ. ಹೀಗಾಗಿ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಆದೇಶಿಸಬೇಕು ಎಂದು ಬಿಜೆಪಿ ನಾಯಕರು ಸಲ್ಲಿಸಿರುವ ಖಾಸಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.




