ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ರಾಜ್ಯ ಸರ್ಕಾರ ನೀಡಿದ್ದ ಡೆಡ್‌ಲೈನ್ ಮುಗಿದಿದೆ. ಆದ್ರೆ, ನಿಗದಿತ ಸಮಯಕ್ಕೆ ಮುಗಿಯದ ಹಿನ್ನೆಲೆ ಗಣತಿಯ ಅವಧಿ ವಿಸ್ತರಣೆ ಮಾಡಲಾಗಿದೆ. ಸೆಪ್ಟೆಂಬರ್ 22ರಿಂದ ಜಾತಿ ಸಮೀಕ್ಷೆ ಆರಂಭಗೊಂಡಿದ್ದು, ಅಕ್ಟೋಬರ್ 7ಕ್ಕೆ ಮುಗಿಸುವಂತೆ ಸರ್ಕಾರ ಹೇಳಿತ್ತು. ಸಮೀಕ್ಷೆ ಇನ್ನು ಬಾಕಿ ಉಳಿದಿರುವ ಹಿನ್ನೆಲೆ ಬೆಂಗಳೂರು ಹೊರತುಪಡಿಸಿ, ರಾಜ್ಯದಲ್ಲಿ ಅಕ್ಟೋಬರ್ 12ರವರೆಗೆ ಸಮೀಕ್ಷೆ ದಿನಾಂಕ ವಿಸ್ತರಣೆ ಮಾಡಲಾಗಿದೆ.
ಸಮೀಕ್ಷೆಯ ಹಿನ್ನೆಲೆಯಲ್ಲಿ ಕರ್ನಾಟಕದಾದ್ಯಂತ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಸಮಯವನ್ನು ಬದಲಾವಣೆ ಮಾಡಿ, ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಅಕ್ಟೋಬರ್ 8ರಿಂದ 12ರವರೆಗೆ ಶಾಲಾ ಸಮಯವನ್ನು ಪರಿಷ್ಕರಣೆ ಮಾಡಲಾಗಿದೆ. ಶಾಲಾ ತರಗತಿಗಳನ್ನು ಬೆಳಗ್ಗೆ 8 ಗಂಟೆಯಿಂದ, ಮಧ್ಯಾಹ್ನ 1 ಗಂಟೆವರೆಗೆ ನಿರ್ವಹಿಸಬೇಕು. ನಂತರದ ಅವಧಿಯಲ್ಲಿ ಶಿಕ್ಷಕರು ಸಮೀಕ್ಷಾ ಕಾರ್ಯದಲ್ಲಿ ಭಾಗಿ ಆಗಬೇಕು. ಸಮೀಕ್ಷೆಯನ್ನು ರಜಾ ದಿನಗಳಲ್ಲಿಯೂ ಕೈಗೊಳ್ಳುವಂತೆ ಆದೇಶಿಸಲಾಗಿದೆ.
ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲೂ ಸರ್ಕಾರಿ ಮತ್ತು ಶಾಲಾ ಅನುದಾನಿತ ಶಾಲೆಗಳಲ್ಲಿ, ಅಕ್ಟೋಬರ್ 08ರಿಂದ 24ರವರೆಗೆ ತರಗತಿಗಳನ್ನು ಬೆಳಗ್ಗೆ 8 ಗಂಟೆಯಿಂದ, ಮಧ್ಯಾಹ್ನ 1 ಗಂಟೆವರೆಗೆ ನಿರ್ವಹಿಸಬೇಕಿದೆ. ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಅಕ್ಟೋಬರ್ 24ವರೆಗೆ ಸಮೀಕ್ಷೆ ಕಾರ್ಯಕ್ಕೆ ಅವಧಿ ವಿಸ್ತರಿಸಲಾಗಿದೆ. ಕರ್ನಾಟಕದಾದ್ಯಂತ ಜಾತಿ ಸಮೀಕ್ಷೆ ಅಕ್ಟೋಬರ್ 12ರೊಳಗೆ ಪೂರ್ಣಗೊಳಿಸಬೇಕು. ಗ್ರೇಟರ್ ಬೆಂಗಳೂರಿನಲ್ಲಿ ಅಕ್ಟೋಬರ್ 24ರೊಳಗೆ ಪೂರ್ಣಗೊಳಿಸಬೇಕೆಂದು, ಶಾಲಾ ಶಿಕ್ಷಣ ಇಲಾಖೆ ಗಡುವು ನೀಡಿದೆ.