ಮೊನ್ನೆ ನಡೆದ ಕೆಪಿಎಸ್‌ಸಿ ಪರೀಕ್ಷೆ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಮರು ಪರೀಕ್ಷೆಗೆ ಒತ್ತಾಯಿಸಿ ಸಾವಿರಾರು ಅಭ್ಯರ್ಥಿಗಳ ಹಾಗೂ ಕನ್ನಡ ಪರ ಹೋರಾಟಗಾರರು ಫ್ರೀಡಂ ಪಾರ್ಕ್ನಲ್ಲಿ ಹೋರಾಟ ನಡೆಸಿದ್ರು. ಅಭ್ಯರ್ಥಿಗಳ ಪ್ರತಿಭಟನೆಗೆ ಮಣಿದಿರೋ ರಾಜ್ಯ ಸರ್ಕಾರ ಮರುಪರೀಕ್ಷೆ ನಡೆಸಲು ತೀರ್ಮಾನ ಮಾಡಿದೆ. ಕೆಪಿಎಸ್‌ಸಿ ಎಡವಟ್ಟಿನ ವಿರುದ್ಧ ಹೋರಾಟ ನಡೆಸಿದ್ದ ಅಭ್ಯರ್ಥಿಗಳಿಗೆ ಜಯ ಸಿಕ್ಕಿದೆ
384 ಕೆಎಎಸ್ ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳಿಗಾಗಿ ಇತ್ತೀಚಿಗೆ ಕೆಪಿಎಸ್‌ಸಿ ನಡೆಸಿದ್ದ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಪತ್ರಿಕೆಯ ಭಾಷಾಂತರದ ಎಡವಟ್ಟು ವ್ಯಾಪಕ ಟೀಕೆ ಹಾಗೂ ಆಕ್ರೋಶಕ್ಕೆ ಗುರಿಯಾಗಿತ್ತು. ಇದರ ಬೆನ್ನಲ್ಲೇ ಮರು ಪರೀಕ್ಷೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಪಿಎಸ್ಸಿಗೆ ಸೂಚಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಿಎಂ, ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೇಷನರ್ ಪರೀಕ್ಷೆಯಲ್ಲಿ ಅಸಮರ್ಪಕ ಕನ್ನಡ ಅನುವಾದದ ಪ್ರಶ್ನೆಗಳ ವರದಿಯ ಹಿನ್ನೆಲೆಯಲ್ಲಿ, ಎಲ್ಲಾ ಅಭ್ಯರ್ಥಿಗಳಿಗೆ ನ್ಯಾಯಸಮ್ಮತತೆಯನ್ನು ಖಚಿತಪಡಿಸಿಕೊಳ್ಳಲು 2 ತಿಂಗಳೊಳಗೆ ಮರು ಪರೀಕ್ಷೆ ನಡೆಸುವಂತೆ ಕೆಪಿಎಸ್ಎಸ್ಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.
ಕೆಪಿಎಸ್‌ಸಿ ಪರೀಕ್ಷಾ ದಿನಾಂಕ ಪ್ರಕಟವಾದಾಗಿನಿಂದ ಒಂದಲ್ಲೊಂದು ಹೋರಾಟಗಳು ವಿರೋಧ ನಡಿತಾನೇ ಇತ್ತು. ಇದರ ನಡುವೆ ಪರೀಕ್ಷೆ ನಡೆಸಿದ ಕೆಪಿಎಸ್‌ಸಿ ಪ್ರಶ್ನೆ ಪತ್ರಿಕೆಯಲ್ಲಿ ಎಡವಟ್ಟು ಮಾಡಿತ್ತು. ಇದೇ ವಿಚಾರವಾಗಿ ಇವತ್ತು ಕರವೇ ನಾರಾಯಣ ಗೌಡ ನೇತೃತ್ವದಲ್ಲಿ ಫ್ರೀಡ್ಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಲಾಗುತ್ತಿತ್ತು. ಕೆಎಎಸ್ ಪ್ರಶ್ನೆ ಪತ್ರಿಕೆ ಕನ್ನಡಕ್ಕೆ ಅನುವಾದ ಮಾಡುವಾಗ ಆಗಿರುವ ಎಡವಟ್ಟುಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿತ್ತು.
ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳು ಪ್ರಶ್ನೆ ಪತ್ರಿಕೆಗಳಲ್ಲಿನ ತಪ್ಪುಗಳನ್ನು ಉಲ್ಲೇಖಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ಟ್ ಮಾಡಿ ಕೆಪಿಎಸ್‌ಸಿ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಕನ್ನಡದ ಹೆಸರಾಂತ ಸಾಹಿತಿ ಬರಗೂರು ರಾಮಚಂದ್ರಪ್ಪ ಸೇರಿದಂತೆ ಹಲವು ಕನ್ನಡ ಸಾಹಿತಿಗಳು ಕೂಡಾ ಇದರ ವಿರುದ್ಧ ಧ್ವನಿ ಎತ್ತಿದ್ದರು. ನಾರಾಯಣ್ ಗೌಡ ಹಾಗೂ ಕೆಪಿಎಸ್‌ಸಿ ಪರೀಕ್ಷಾರ್ಥಿಗಳು ಫ್ರೀಡ್ಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಬೆನ್ನಲೆ ಸಿಎಂ ಮರುಪರೀಕ್ಷೆಗೆ ಸೂಚಿಸಿದ್ದಾರೆ. ಜೊತೆಗೆ ಈ ಲೋಪಗಳಿಗೆ ಕಾರಣರಾದವರನ್ನು ಕರ್ತವ್ಯದಿಂದ ಮುಕ್ತಗೊಳಿಸಲಾಗಿದೆ. ಮುಂಬರುವ ಪರೀಕ್ಷೆಯನ್ನು ಅತ್ಯಂತ ಜವಾಬ್ದಾರಿ ಮತ್ತು ಹೊಣೆಗಾರಿಕೆಯೊಂದಿಗೆ ನಡೆಸಲಾಗುವುದು.
ನೇಮಕಾತಿ ಪ್ರಕ್ರಿಯೆಗಳ ಸಮಗ್ರತೆಯನ್ನು ಎತ್ತಿಹಿಡಿಯಲು ನಾವು ಬದ್ಧರಾಗಿದ್ದೇವೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಈ ಸುದ್ದಿ ಕೇಳ್ತಿದ್ದಂಗೆ ಪ್ರತಿಭಟನಾಕಾರರು ಸಂಭ್ರಮಾಚರಣೆ ಮಾಡಿದ್ರು.
ಮರು ಪರೀಕ್ಷೆಯಿಂದ ಕೆಪಿಎಸ್ ಸಿಗೆ ನಾಲ್ಕು ಕೋಟಿ ನಷ್ಟವಾಗಿದೆ. ಆದ್ರೆ, ಕನ್ನಡ ಪ್ರಶ್ನೆ ಪತ್ರಿಕೆಯ ಎಡವಟ್ಟುಗಳು ದೊಡ್ಡಟೀಕೆಗೆ ಗುರಿಯಾಗಿ ಸರ್ಕಾರಕ್ಕೆ ಮುಜುಗರ ತಂದೊಡ್ಡಿದೆ. ಸದ್ಯ ಎರಡು ತಿಂಗಳಲ್ಲಿ ಮರು ಪರೀಕ್ಷೆ ನಡೆಸುವ ಬಗ್ಗೆ ಸರ್ಕಾರ ಹೇಳಿದ್ದು, ಲಕ್ಷಾಂತರ ಪರೀಕ್ಷಾರ್ಥಿಗಳು ನಿರಾಳವಾಗಿದ್ದಾರೆ.