ಈ ವರ್ಷ ಬಹಳಷ್ಟು ತೆರಿಗೆ ಪಾವತಿದಾರರು ತಮ್ಮ ಆದಾಯ ತೆರಿಗೆ ರಿಫಂಡ್‌ಗಾಗಿ ಕಾಯ್ತಿದ್ದಾರೆ. ಸಾಮಾನ್ಯವಾಗಿ ಐಟಿಆರ್ ಇ-ವೆರಿಫಿಕೇಶನ್ ಆದ ನಂತರ 4 ರಿಂದ 5 ವಾರಗಳಲ್ಲಿ ರಿಫಂಡ್ ಕ್ರೆಡಿಟ್ ಆಗಬೇಕು. ಆದರೆ ಈಗ ಪರಿಶೀಲನೆ ಸಮಸ್ಯೆಗಳು, ತಪ್ಪಾದ ಬ್ಯಾಂಕ್ ಮಾಹಿತಿ ಮತ್ತು ಪ್ರಕ್ರಿಯೆಯಲ್ಲಿನ ವಿಳಂಬದಿಂದಾಗಿ ರಿಫಂಡ್‌ಗಳು ತಡವಾಗುತ್ತಿವೆ.
ರಿಫಂಡ್ ಯಾಕೆ ಸಿಗುತ್ತದೆ? ನೀವು ಪಾವತಿಸಿದ ತೆರಿಗೆ ನಿಮ್ಮ ನಿಜವಾದ ತೆರಿಗೆ ಹೊಣೆಗಾರಿಕೆಗಿಂತ ಹೆಚ್ಚಾಗಿದ್ದರೆ, ಹೆಚ್ಚುವರಿ ಮೊತ್ತವನ್ನು ಸರ್ಕಾರ ನಿಮ್ಮ ಖಾತೆಗೆ ಮರುಪಾವತಿ ಮಾಡುತ್ತದೆ. ಟಿಡಿಎಸ್ ಹೆಚ್ಚು ಕಟ್ ಆಗಿದ್ದರೆ, ಮುಂಗಡ ತೆರಿಗೆ ಹೆಚ್ಚಾಗಿ ಪಾವತಿಸಿದ್ದರೆ ಅಥವಾ ಕಡಿತ – ವಿನಾಯಿತಿಗಳಿಂದ ತೆರಿಗೆ ಕಡಿಮೆಯಾಗಿದ್ದರೆ ಈ ರಿಫಂಡ್ ಉಂಟಾಗುತ್ತದೆ.
ಈ ಬಾರಿ ರಿಫಂಡ್ ತಡವಾಗಲು ಮುಖ್ಯ ಕಾರಣಗಳು ಬ್ಯಾಂಕ್ ಖಾತೆ ಪ್ರೀ-ವ್ಯಾಲಿಡೇಷನ್ ಮಾಡದೇ ಇರುವುದು, ಪ್ಯಾನ್–ಆಧಾರ್ ಲಿಂಕ್ ಆಗದೇ ಇರುವುದು, ಬ್ಯಾಂಕ್ ಖಾತೆಯ ಹೆಸರು ಪ್ಯಾನ್ ಹೆಸರಿಗೆ ಹೊಂದಿಕೆಯಾಗದಿರುವುದು ಮತ್ತು IFSC ಕೋಡ್ ತಪ್ಪಾಗಿರುವುದು. ಜೊತೆಗೆ ಐಟಿಆರ್‌ನಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದರೂ ಹೆಚ್ಚುವರಿ ಪರಿಶೀಲನೆ ನಡೆಯುತ್ತದೆ.
ರಿಫಂಡ್ ಸ್ಥಿತಿಯನ್ನು ಮನೆಬಿಟ್ಟು ಹೋಗದೆ ಆನ್‌ಲೈನ್‌ನಲ್ಲಿ ಪ್ಯಾನ್ ಕಾರ್ಡ್ ಬಳಸಿ ಚೆಕ್ ಮಾಡಬಹುದು. www.incometax.gov.in
ಪೋರ್ಟಲ್‌ನಲ್ಲಿ ಲಾಗಿನ್ ಆಗಿ, View Filed Returns ಓಪನ್ ಮಾಡಿದರೆ ಪ್ರತಿಯೊಂದು ಮೌಲ್ಯಮಾಪನ ವರ್ಷದ ರಿಫಂಡ್ ಸ್ಥಿತಿ ನಿಮ್ಮ ಮುಂದಿರುತ್ತದೆ. ಸಿಪಿಸಿ ರಿಫಂಡ್ ಕಳುಹಿಸಿದರೆ TIN–NSDL ಪೋರ್ಟಲ್ ಮೂಲಕವೂ ಸ್ಥಿತಿಯನ್ನು ಪರಿಶೀಲಿಸಬಹುದು.
ಐಟಿಆರ್ ಯಶಸ್ವಿಯಾಗಿ ಇ-ವೆರಿಫೈ ಆದ ನಂತರವೇ ರಿಫಂಡ್ ಪ್ರಕ್ರಿಯೆ ಶುರುವಾಗುತ್ತದೆ. ಸಾಮಾನ್ಯವಾಗಿ 4–5 ವಾರಗಳಲ್ಲಿ ಹಣ ಖಾತೆಗೆ ಬರುತ್ತದೆ. ಹೆಚ್ಚು ಕಾಲ ತೆಗೆದುಕೊಳ್ಳುತ್ತಿದ್ದರೆ, ಪೋರ್ಟಲ್‌ನಲ್ಲಿ ರಿಫಂಡ್ ಸ್ಥಿತಿಯನ್ನು ಚೆಕ್ ಮಾಡುವುದು, ಯಾವುದೇ ನೋಟಿಸ್ ಅಥವಾ ಇಂಟಿಮೇಶನ್ ಬಂದಿದೆಯೇ ಎಂದು ನೋಡಿಕೊಳ್ಳುವುದು ಅಗತ್ಯ. ಸಮಸ್ಯೆಗಳನ್ನು ಸರಿಪಡಿಸಿದರೆ ರಿಫಂಡ್ ನಿಮ್ಮ ಖಾತೆಗೆ ಸುಲಭವಾಗಿ ಕ್ರೆಡಿಟ್ ಆಗುತ್ತದೆ.
ವರದಿ : ಗಾಯತ್ರಿ ಗುಬ್ಬಿ

