ಈ ನೌಕರರಿಗೆ ದೀಪಾವಳಿ ಗಿಫ್ಟ್ – ಸಿಬ್ಬಂದಿಗೆ ₹14,000ವರೆಗೆ ಬೋನಸ್!

ದೀಪಾವಳಿ ಹಬ್ಬದ ಹತ್ತಿರದಲ್ಲೇ ಅಂಚೆ ಇಲಾಖೆಯ ನೌಕರರಿಗೆ ಸರ್ಕಾರದಿಂದ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ಹೌದು, ರೈಲ್ವೆ ಇಲಾಖೆಯ ಬೆನ್ನಲ್ಲೇ ಈಗ ಅಂಚೆ ಇಲಾಖೆಯು ತನ್ನ ನೌಕರರಿಗೆ ಬೋನಸ್ ಘೋಷಿಸಿದ್ದು, ಅರ್ಹ ಸಿಬ್ಬಂದಿಗೆ ಬರೋಬ್ಬರಿ 14 ಸಾವಿರ ರೂಪಾಯಿವರೆಗೆ ಬೋನಸ್ ಹಣ ಸಿಗಲಿದೆ.

2025-26ರ ಹಣಕಾಸು ವರ್ಷಕ್ಕೆ ಅರ್ಹ ನೌಕರರಿಗೆ ಬೋನಸ್ ನೀಡಲು ಅಂಚೆ ಇಲಾಖೆ ಅಧಿಕೃತ ಅನುಮೋದನೆ ನೀಡಿದೆ. ಶುಕ್ರವಾರ ಹೊರಡಿಸಲಾದ ಈ ಆದೇಶದ ಪ್ರಕಾರ, ಅರ್ಹ ನಿಯಮಿತ ಅಂಚೆ ಉದ್ಯೋಗಿಗಳಿಗೆ ಬರೋಬ್ಬರಿ 60 ದಿನಗಳ ವೇತನಕ್ಕೆ ಸಮಾನವಾದ ‘ಉತ್ಪಾದಕತೆ ಆಧಾರಿತ ಬೋನಸ್’ ಸಿಗಲಿದೆ. ಕೇಂದ್ರ ಹಣಕಾಸು ಸಚಿವರಿಂದಲೂ ಇದಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ದೀಪಾವಳಿಗೂ ಮುನ್ನವೇ ಈ ಹಣ ನೌಕರರ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ.

ಈ ಬೋನಸ್ ಸೌಲಭ್ಯವು ವಿವಿಧ ವರ್ಗದ ಉದ್ಯೋಗಿಗಳಿಗೆ ತಲುಪಲಿದೆ. ಮಲ್ಟಿ-ಟಾಸ್ಕಿಂಗ್ ಸ್ಟಾಫ್ ಅಂದರೆ ಎಂಟಿಎಸ್, ಗ್ರೂಪ್ ‘ಸಿ’ ಮತ್ತು ನಾನ್-ಗೆಜೆಟೆಡ್ ಗ್ರೂಪ್ ‘ಬಿ’ ನೌಕರರಿಗೆ ಈ ಬೋನಸ್ ಸಿಗಲಿದೆ. ಇದರೊಂದಿಗೆ, ಸೇವಾ ಮಾನದಂಡ ಪೂರೈಸುವ ಗ್ರಾಮೀಣ ಡಾಕ್ ಸೇವಕರಿಗೆ ಎಕ್ಸ್-ಗ್ರೇಷಿಯಾ ಬೋನಸ್ ಹಾಗೂ ಹಂಗಾಮಿ ತಾತ್ಕಾಲಿಕ ನೌಕರರಿಗೆ ಆಡ್-ಹಾಕ್ ಬೋನಸ್ ಕೂಡ ದೊರೆಯಲಿದೆ.

ನಿಯಮಿತ ನೌಕರರ ಬೋನಸ್ ಲೆಕ್ಕಾಚಾರಕ್ಕಾಗಿ ಗರಿಷ್ಠ ಮಾಸಿಕ ವೇತನ ಮಿತಿಯನ್ನು 7,000 ರೂಪಾಯಿ ಎಂದು ನಿಗದಿಪಡಿಸಲಾಗಿದೆ. ಸಂಪೂರ್ಣ ವರ್ಷದ ಸೇವೆ ಪೂರೈಸಿರುವ ಅರ್ಹ ಉದ್ಯೋಗಿಗಳಿಗೆ, ದಿನಗೂಲಿ ಲೆಕ್ಕಾಚಾರದ ಆಧಾರದಲ್ಲಿ 60 ದಿನಗಳಿಗೆ ಅಂದಾಜು 14,000 ರೂಪಾಯಿಗಳವರೆಗೆ ಬೋನಸ್ ಖಾತೆಗೆ ಜಮೆ ಆಗಲಿದೆ.

ಹಬ್ಬದ ಈ ವಿಶೇಷ ಸಂದರ್ಭದಲ್ಲಿ ಅಂಚೆ ಇಲಾಖೆ ನೀಡಿರುವ ಈ ಆರ್ಥಿಕ ನೆರವಿನಿಂದ ದೇಶಾದ್ಯಂತ ಇರುವ ಸಾವಿರಾರು ಅಂಚೆ ನೌಕರರ ಕುಟುಂಬಗಳಲ್ಲಿ ದೀಪಾವಳಿಯ ಸಂಭ್ರಮ ಮತ್ತಷ್ಟು ಇಮ್ಮಡಿಗೊಂಡಿದೆ.

About The Author