ಇಡೀ ದೇಶಾದ್ಯಂತ ಇಂಡಿಗೋ ಏರ್ಲೈನ್ ದೇ ಚರ್ಚೆಯಾಗಿತ್ತು. ವಿಮಾನ ಪ್ರಯಾಣಕ್ಕೆ ಬುಕ್ ಮಾಡಿದ ಪ್ರಯಾಣಿಕರು ಕಂಗಾಲಾಗಿದ್ದರು. ಸರಿಯಾದ ಸಮಯಕ್ಕೆ ಹೋಗದೆ ಜನರಿಗೆ ಅಡತಡೆಯನ್ನುಂಟಾಗಿತ್ತು. ಆಗ ನೆರವಾಗಿದ್ದೇ ನೈರುತ್ಯ ರೈಲ್ವೆ. ದೇಶಾದ್ಯಂತ ಸಂಚರಿಸುತ್ತಿದ್ದ ಸಾವಿರಾರು ವಿಮಾನಗಳು ರದ್ದಾಗಿ ಪ್ರಯಾಣಿಕರ ರೈಲ್ವೆಯತ್ತ ಮುಖ ಮಾಡಿದ್ದಾರೆ. ಹಾಗಾಗಿ ರೈಲ್ವೆ ಇಲಾಖೆ ದೇಶಾದ್ಯಂತ ವಿಶೇಷ ರೈಲುಗಳನ್ನು ಓಡಿಸುವ ಮೂಲಕ ಇಂಡಿಗೋ ವಿಮಾನ ಸಂಚಾರದಿಂದ ಆದ ಅಡೆತಡೆಯನ್ನು ನಿಭಾಯಿಸುವ ಪ್ರಯತ್ನ ಮಾಡುತ್ತಿದೆ.
ಪೈಲೆಟ್, ಸಿಬ್ಬಂದಿ ಕೊರತೆ, ತಾಂತ್ರಿಕ ವಿಮಾನಗಳ ತೊಂದರೆಗಳಿಂದಾಗಿ ದೇಶಾದ್ಯಂತ 1000ಕ್ಕೂ ಹೆಚ್ಚು ಇಂಡಿಗೋ ಸಂಸ್ಥೆ ಹಾರಾಟ ರದ್ದುಪಡಿಸಿದೆ. ಐದಾರು ದಿನಗಳಾದರೂ ಪರಿಸ್ಥಿತಿ ಸುಧಾರಿಸುತ್ತಿಲ್ಲ. ವಿಮಾನ ಇಲ್ಲದೇ ಸಕಾಲಕ್ಕೆ ಗಮ್ಯ ಸ್ಥಳಕ್ಕೆ ಹೋಗಲು ಸಾಧ್ಯವಾಗದೇ ಪ್ರಯಾಣಿಕರು ಕಂಗಾಲಾಗುತ್ತಿದ್ದಾರೆ. ಅಸ್ಥಿ ವಿಸರ್ಜನೆಗೆ ಹೋಗಲು ಸಾಧ್ಯವಾಗದೇ ಅಲ್ಲಲ್ಲಿ ಕೆಲವರು ಸಿಲುಕಿದ್ದರೆ, ಮತ್ತೆ ಕೆಲವರು ತಮ್ಮ ಆರತಕ್ಷತೆಗೆ ಆನ್ ಲೈನ್ ಮೂಲಕ ಹಾಜರಾಗಿರುವುದುಂಟು.
ಹನಿಮೂನ್ ಕೂಡ ಕ್ಯಾನ್ಸಲ್ ಮಾಡಿದ ಪ್ರಸಂಗಗಳು ನಡೆದಿರುವುದುಂಟು. ಹೀಗಾಗಿ, ವಿಮಾನ ನಿಲ್ದಾಣಗಳಲ್ಲಿ ಪ್ರತಿಭಟನೆ, ಮಾತಿನ ಚಕಮಕಿ ನಿತ್ಯ ನಿರಂತರ ಎಂಬಂತಾಗಿದೆ. ವಿಮಾನ ತಪ್ಪಿಸಿಕೊಂಡ ಪ್ರಯಾಣಿಕರು ಸಹಜವಾಗಿ ರೈಲಿನತ್ತ ತಮ್ಮ ದೃಷ್ಟಿ ನೆಡುತ್ತಿದ್ದು, ರೈಲುಗಳು ರಶ್ ಆಗುತ್ತಿವೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ರೈಲ್ವೆ ಇಲಾಖೆಯೂ ವಿವಿಧ ಸ್ಥಳಗಳಿಗೆ ವಿಶೇಷ ರೈಲುಗಳನ್ನು ಓಡಿಸುತ್ತಿದೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲೂ ಇಂಡಿಗೋ ಬಿಕ್ಕಟ್ಟು ತಟ್ಟಿತ್ತು. ಕಳೆದ ಎರಡು ದಿನಗಳಿಂದ ಹುಬ್ಬಳ್ಳಿ- ಮುಂಬೈ ಹಾಗೂ ಹುಬ್ಬಳ್ಳಿ- ದೆಹಲಿ ವಿಮಾನಗಳು ರದ್ದಾಗಿದ್ದವು. ಆದ್ರೆ ಇಂದು ಎಲ್ಲಾ ವಿಮಾನ ಸೇವೆ ಯಥಾಸ್ಥಿತಿಗೆ ಬಂದಿವೆ. ಎಂದಿನಂತೆ ಹುಬ್ಬಳ್ಳಿ- ದೆಹಲಿ, ಹುಬ್ಬಳ್ಳಿ- ಮುಂಬೈ, ಹುಬ್ಬಳ್ಳಿ – ಹೈದರಾಬಾದ್, ಹುಬ್ಬಳ್ಳಿ – ಪುಣೆ, ಹುಬ್ಬಳ್ಳಿ – ಬೆಂಗಳೂರು ನಡುವೆ ವಿಮಾನ ಸೇವೆ ಆರಂಭವಾಗಿದೆ. ಆದ್ರೆ ವೇಳೆಯಲ್ಲಿ ಬದಲಾವಣೆಯಾಗಿದ್ದು, ಅರ್ಧ ಗಂಟೆಗೂ ಹೆಚ್ಚು ಕಾಲ ಸಮಯದಲ್ಲಿ ವ್ಯತ್ಯಾಸವಿದೆ. ಮುಂದಿನ ದಿನಗಳಲ್ಲಿ ಸರಿಹೋಗಲಿದೆ ಎಂದು ಹುಬ್ಬಳ್ಳಿ ಟರ್ಮಿನಲ್ ಇನ್ ಚಾರ್ಜ್ B.V ಪ್ರತಾಪ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.




