ದೇಶದ ವಾಯುಯಾನ ಕ್ಷೇತ್ರದಲ್ಲಿ ಏನಾಗುತ್ತಿದೆ ಎಂಬ ಪ್ರಶ್ನೆ ಇದೀಗ ಲಕ್ಷಾಂತರ ಪ್ರಯಾಣಿಕರ ಮನಸ್ಸನ್ನು ಕಾಡುತ್ತಿದೆ. ಕಳೆದ ಕೆಲವು ದಿನಗಳಿಂದ ಇಂಡಿಗೋ ವಿಮಾನಯಾನ ಸಂಸ್ಥೆಯ ಸುತ್ತ ನಡೆಯುತ್ತಿರುವ ಗೊಂದಲ, ವಿಳಂಬ, ರದ್ದತಿ… ಇವೆಲ್ಲಕ್ಕೂ ಅನೇಕ ಕಾರಣಗಳು ಯಾರಿಗೂ ಸರಿಯಾಗಿ ಅರ್ಥವಾಗದ ಪರಿಸ್ಥಿತಿ. ಆದರೆ, ಈ ಗೊಂದಲದ ಹಿಂದೆ ಕೇವಲ ಆಂತರಿಕ ಲೋಪಗಳೇನಾ? ಅಥವಾ ದೊಡ್ಡ ಪ್ರಮಾಣದ ಬಾಹ್ಯ ಒತ್ತಡ, ರಾಜಕೀಯ ಸೂಕ್ಷ್ಮತೆ, ಅಂತಾರಾಷ್ಟ್ರೀಯ ಷಡ್ಯಂತ್ರಗಳ ಕೈವಾಡವಿದೆಯಾ? — ಇಂದು ನಾವು ಈ ಸಂಪೂರ್ಣ ವಿಷಯವನ್ನು ಆಳವಾಗಿ ವಿಶ್ಲೇಷಿಸುತ್ತಿದ್ದೇವೆ.
ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ವಿಮಾನಯಾನ ಕ್ಷೇತ್ರವು ಅತೀವ ತೀವ್ರ ಏರುಪೇರುಗಳನ್ನು ಎದುರಿಸಿದೆ. ಒಮ್ಮೆ ದೊಡ್ಡ ಹೆಸರಾಗಿದ್ದ ಜೆಟ್ ಏರ್ವೇಸ್ ಕುಸಿಯಿತು… ಗೋ ಫಸ್ಟ್ ಸ್ಥಗಿತಗೊಂಡಿತು… ಸ್ಪೈಸ್ಜೆಟ್ ಆರ್ಥಿಕ ಸಂಕಷ್ಟದಲ್ಲಿ ತತ್ತರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಇಂಡಿಗೋ, ಏರ್ ಇಂಡಿಯಾ ಮತ್ತು ಆಕಾಶ ಏರ್ ಮಾತ್ರ ಬಲವಾಗಿ ಉಳಿದಿವೆ.
ಆದರೆ, ದೇಶೀಯ ಮಾರುಕಟ್ಟೆಯ 76% ಪಾಲನ್ನು ಹೊಂದಿರುವ ಇಂಡಿಗೋ… ಇದೀಗ ತನ್ನ ಕಾರ್ಯವ್ಯವಸ್ಥೆಯಲ್ಲೇ ಗಂಭೀರ ಅಸ್ಥಿರತೆಯನ್ನು ಎದುರಿಸುತ್ತಿದೆ. ವ್ಯಾಪಕ ವಿಮಾನ ರದ್ದತಿ, ಉದ್ದಕ್ಕೂ ಸಂಭವಿಸುವ ವಿಳಂಬ, ಗೇಟ್ಗಳಲ್ಲಿ ಗೊಂದಲ… ಮತ್ತು ಪ್ರಯಾಣಿಕರೊಂದಿಗೆ ಸಿಬ್ಬಂದಿ ನಡೆಸುತ್ತಿರುವ ಕಳಪೆ ವರ್ತನೆ — ಇವೆಲ್ಲಾ ದೇಶದಾದ್ಯಂತ ಆಕ್ರೋಶ ಹುಟ್ಟಿಸಿವೆ.
ನಿರ್ವಹಣಾ ತಪ್ಪುಗಳ ಬಗ್ಗೆ ಪ್ರಶ್ನೆಗಳು ಎದ್ದಿವೆ. DGCA ಬಿಡುಗಡೆ ಮಾಡಿದ ಸಿಬ್ಬಂದಿ ಕರ್ತವ್ಯದ ಸಮಯ ಮತ್ತು ಆಯಾಸ ನಿರ್ವಹಣೆ ಕುರಿತ ಹೊಸ ನಿಯಮಗಳು ಈಗಿನ ಅಸ್ತವ್ಯಸ್ತತೆಗೆ ತಕ್ಷಣದ ಕಾರಣವಾದರೂ… ಈ ನಿಯಮಗಳು ಒಂದು ದಿನ ಮುಂಚಿತವಾಗಿ ಬಂದದ್ದಲ್ಲ. ಇಂಡಿಗೋ ಮ್ಯಾನೇಜ್ಮೆಂಟ್ಗೆ ಇದು ಮುಂಚಿತವಾಗಿಯೇ ಗೊತ್ತಿತ್ತು. ಹಾಗಿದ್ದರೂ ಸೂಕ್ತ ಯೋಜನೆ, ಅಗತ್ಯ ಸಿಬ್ಬಂದಿ ನೇಮಕಾತಿ, ಹಾಗೂ ಶಿಸ್ತುಬದ್ಧ ವೇಳಾಪಟ್ಟಿ — ಇವೆಲ್ಲವೂ ಏಕೆ ಮಾಡಲಾಗಲಿಲ್ಲ ಎಂಬ ಪ್ರಶ್ನೆ ಲೇವನಿಯುತ್ತಿದೆ.
ಸಂವಹನದ ಕೊರತೆ ಮತ್ತೊಂದು ದೊಡ್ಡ ಸಮಸ್ಯೆ. ಪ್ರಯಾಣಿಕರು ತಡವಾಗುತ್ತಿದ್ದರೂ, ಅವರಿಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಕೆಲ ಸಿಬ್ಬಂದಿಯಿಂದ ಅಸಭ್ಯ ವರ್ತನೆ, ಕಿರುಕುಳ — ಇದು ಬ್ರ್ಯಾಂಡ್ಗಷ್ಟೇ ಹಾನಿ ಮಾಡುತ್ತಿಲ್ಲ, ದೇಶದ ವಾಯುಯಾನ ವಿಶ್ವಾಸಕ್ಕೂ ಕಲೆ ತರುತ್ತಿದೆ. ಪ್ರೇಕ್ಷಕರೇ, ಯಾವ ಸಂಸ್ಥೆಯೂ ‘ಅಸಾಧ್ಯ ಕುಸಿಯುವಂತದ್ದು’ ಅಲ್ಲ. ಇಂಡಿಗೋ ತನ್ನ ಬೆಳವಣಿಗೆಗೆ ಕಾರಣವಾದ ಪ್ರಯಾಣಿಕರನ್ನೇ ಗೌರವಿಸಬೇಕು.
ಈ ಗೊಂದಲವು ಕೇವಲ ಆಂತರಿಕ ಸಮಸ್ಯೆಯೋ ಅಥವಾ ದೊಡ್ಡ ಆಟವೋ ಎಂಬ ಸಂಶಯಗಳು ಹೆಚ್ಚುತ್ತಿವೆ. ಪುನಃ ಕೇಳಬೇಕಾದ ಪ್ರಶ್ನೆ — ಈ ಬಿಕ್ಕಟ್ಟು ಏಕೆ ಇದಷ್ಟೇ ಸಮಯಕ್ಕೆ? ರಷ್ಯಾ ಅಧ್ಯಕ್ಷ ಪುಟಿನ್ರ ಭಾರತ ಭೇಟಿ… ಪ್ರಮುಖ ರಾಜತಾಂತ್ರಿಕ ಘಟನೆಗಳು… ಮತ್ತು ಇದೇ ಸಮಯದಲ್ಲಿ ಏಕಾಏಕಿ ಉಂಟಾದ ಇಂಡಿಗೋ ಅಸ್ಥಿರತೆ — ಇದು ಕೇವಲ ಕಾಕತಾಳೀಯವೇ?
ಅಮೇರಿಕಾದಂತಹ ಬಲಿಷ್ಠ ರಾಷ್ಟ್ರಗಳು ಭಾರತವನ್ನು ತಮ್ಮ ಪ್ರಭಾವ ವಲಯದೊಳಗೆ ಇಡಲು ಬಯಸುತ್ತಿವೆ ಎಂಬ ಮಾತುಗಳು ಹೊಸದಲ್ಲ. ಭಾರತದ ಆರ್ಥಿಕ ಬೆನ್ನೆಲುಬನ್ನು ಅಸ್ಥಿರಗೊಳಿಸುವ ಯಾವುದೇ ಘಟನೆಯೂ ಅವರಿಗೆ ಅನುಕೂಲವಾಗುತ್ತದೆ. ಇಂಡಿಗೋ ಕುಸಿದರೆ, ಭಾರತದ ವಿಮಾನಯಾನ ವಲಯವೇ ತತ್ತರಿಸುವ ಸಾಧ್ಯತೆ ಇದೆ — ಇದು ನೇರವಾಗಿ ಆರ್ಥಿಕ ಭದ್ರತೆಗೆ ಹೊಡೆತ.
ತಾಂತ್ರಿಕ ಸಮಸ್ಯೆಯ ಹೆಸರಿನಲ್ಲಿ ಬಂದ ದೆಹಲಿ ವಿಮಾನ ನಿಲ್ದಾಣದ GPS ಗೊಂದಲ ಕೂಡ ಯಾಂತ್ರಿಕ ದೋಷವೇ? ಅಥವಾ ಬಾಹ್ಯ ಶಕ್ತಿಗಳ ಹಸ್ತಕ್ಷೇಪ? — ಈ ಪ್ರಶ್ನೆಗಳು ಈಗ ತೀವ್ರವಾಗಿ ಚರ್ಚೆಗೆ ಬಂದಿವೆ. ಈ ಎಲ್ಲಾ ಘಟನೆಗಳ ನಡುವೆಯೇ… ಇಂಡಿಗೋ ನಾಯಕತ್ವದ ಮೌನ ಜನರ ಅನುಮಾನಗಳನ್ನು ಹೆಚ್ಚಿಸಿದೆ. ಮುಂದೆ ಬಂದು, ಸ್ಪಷ್ಟವಾಗಿ ಮಾಹಿತಿ ನೀಡುವುದಕ್ಕೆ ಬದಲು, ನಿರ್ವಹಣೆಯು ತಪ್ಪಿಸಿಕೊಳ್ಳುತ್ತಿರುವಂತೆ ತೋರುತ್ತಿದೆ. ಸಾಮಾನ್ಯ ಪ್ರಯಾಣಿಕರಿಗಾದರೆ, ‘ನಾವು ಸುರಕ್ಷಿತವೋ?’ ಎಂಬ ಆತಂಕ ಹೆಚ್ಚುತ್ತಿದೆ.
ಈಗ ಅಗತ್ಯವಿರುವುದು ಸತ್ಯದತ್ತ ಮುಖ ಮಾಡಿ ನೇರವಾಗಿ ಮಾತನಾಡುವ ನಾಯಕತ್ವ ಮತ್ತು ಪಾರದರ್ಶಕ ತನಿಖೆ. ಈ ಬಿಕ್ಕಟ್ಟಿನಲ್ಲಿ ಸರ್ಕಾರಕ್ಕೂ ದೊಡ್ಡ ಜವಾಬ್ದಾರಿ ಇದೆ. ಆಡಳಿತಾತ್ಮಕ ಲೋಪಗಳ ಜೊತೆಗೆ, ಬಾಹ್ಯ ಶಕ್ತಿಗಳ ಪ್ರಭಾವವಿದೆಯೇ ಎಂಬುದು ಸ್ಪಷ್ಟಗೊಳಿಸುವ ತನಿಖೆ ನಡೆಯಬೇಕು.
ಭಾರತೀಯ ವಿಮಾನಯಾನ ಕ್ಷೇತ್ರದ ಬೆನ್ನೆಲುಬನ್ನು ಮರುಸ್ಥಾಪಿಸುವುದು ಈಗ ತುರ್ತು ಅಗತ್ಯ. ಇಂಡಿಗೋ ಮತ್ತೆ ಸುರಕ್ಷಿತ, ವಿಶ್ವಾಸಾರ್ಹ ಸೇವೆ ನೀಡಲಿ… ಜನರು ಮತ್ತೆ ಧೈರ್ಯವಾಗಿ ಹಾರಲಿ… ಇದೇ ಜನರ ನಿರೀಕ್ಷೆ. ಪ್ರೇಕ್ಷಕರೇ… ಪ್ರಯಾಣಿಕರಲ್ಲಿ ಈಗ ಮೂಡಿರುವ ಭಯ ಕೇವಲ ಒಂದು ಕಂಪೆನಿಯ ಮೇಲಿನ ನಂಬಿಕೆ ಕುಸಿತವಲ್ಲ. ದೇಶದ ವಾಯುಯಾನ ವ್ಯವಸ್ಥೆಯ ಮೇಲಿನ ಒಟ್ಟಾರೆ ವಿಶ್ವಾಸವೇ ಕುಗ್ಗುತ್ತಿದೆ.
ದಿನಕ್ಕೆ ಲಕ್ಷಾಂತರ ಜನ ಹಾರಾಟ ಮಾಡುತ್ತಿರುವ ಭಾರತದಲ್ಲಿ, ಇಂತಹ ಗೊಂದಲಗಳು ಮುಂದುವರಿದರೆ, ವ್ಯಾಪಾರ, ಪ್ರವಾಸೋದ್ಯಮ, ತುರ್ತು ವೈದ್ಯಕೀಯ ಪ್ರಯಾಣ — ಎಲ್ಲವೂ ಪರಿಣಾಮಕ್ಕೊಳಗಾಗಲಿವೆ. ಉದ್ಯೋಗ, ಆರ್ಥಿಕ ಚಟುವಟಿಕೆ ಮತ್ತು ಅಂತರಾಷ್ಟ್ರೀಯ ಬಂಡವಾಳ — ಇವೆಲ್ಲಕ್ಕೂ ಇದು ಹೊಡೆತ. ಹೀಗಾಗಿ, ಇಂಡಿಗೋ ಸಮಸ್ಯೆ ಎಂದರೆ ಅದು ಕೇವಲ ಕಾರ್ಪೊರೇಟ್ ಸಮಸ್ಯೆಯಾಗಿರದೆ, ಇದು ರಾಷ್ಟ್ರೀಯ ಮಟ್ಟದ ಆತಂಕಕಾರಕ ಎಚ್ಚರಿಕೆಯ ಗಂಟೆಯಾಗಿದೆ.
ಈ ಬಿಕ್ಕಟ್ಟಿನ ನಡುವೆಯೇ ಒಂದು ಮಹತ್ವದ ಪ್ರಶ್ನೆ — ಭಾರತ ಮುಂದೇನು ಮಾಡಬೇಕು?
ಬಲಿಷ್ಠ, ಪ್ರಬಲ, ಸ್ವತಂತ್ರ ವಿಮಾನಯಾನ ಮೂಲಸೌಕರ್ಯ ನಿರ್ಮಾಣ ಈಗ ತಪ್ಪದೇ ಬೇಕಾದ ಅಗತ್ಯವಾಗಿದೆ. ಇಂಡಿಗೋ ಏಕಾಧಿಕಾರಕ್ಕೆ ತುತ್ತಾಗದಂತೆ ಸರ್ಕಾರ ಹೊಸ ಕಂಪೆನಿಗಳಿಗೆ ಉತ್ತೇಜನ ನೀಡಬೇಕು. ಏರ್ ಇಂಡಿಯಾ ಪರಿವರ್ತನೆಯನ್ನು ವೇಗಗೊಳಿಸಬೇಕು. ಸಿಬ್ಬಂದಿ ತರಬೇತಿ, ತಾಂತ್ರಿಕ ಮೂಲಸೌಕರ್ಯ, ಸಂವಹನ ಪಾರದರ್ಶಕತೆ — ಇವೆಲ್ಲಕ್ಕೂ ಹೊಸ ಮಾನದಂಡಗಳನ್ನು ಜಾರಿಗೆ ತರುವುದು ಅತ್ಯಂತ ಅವಶ್ಯಕ. ಭಾರತ ಮುಂದಿನ ದಶಕದಲ್ಲಿ ವಿಶ್ವದ ಮೂರನೇ ಅತಿ ದೊಡ್ಡ ವಾಯುಯಾನ ಮಾರುಕಟ್ಟೆಯಾಗಲಿರುವಾಗ… ಇಂದಿನ ಗೊಂದಲಗಳು ದೊಡ್ಡ ಪಾಠ. ಈ ಕ್ಷೇತ್ರವನ್ನು ಬಲಪಡಿಸಿದರೆ, ದೇಶದ ಆರ್ಥಿಕತೆ ಮತ್ತಷ್ಟು ವೇಗವಾಗಿ ಏರಬಹುದು.
ಇಂಡಿಗೋದ ಈ ಬಿಕ್ಕಟ್ಟು ತಾತ್ಕಾಲಿಕ ಕಲ್ಲುಬಿದ್ದಂತೆ ಕಾಣಿಸಿದರೂ… ಇದರ ಅಲುಗಾಟ ದೇಶದ ಆರ್ಥಿಕತೆಗೆ ನೇರ ಹೊಡೆತ. ಹೀಗಾಗಿ, ಪಾರದರ್ಶಕ ತನಿಖೆ, ಬಲಿಷ್ಠ ನಾಯಕತ್ವ ಮತ್ತು ನಿಜಾಂಶ ಬಹಿರಂಗ — ಈಗ ದೇಶಕ್ಕೆ ಅತ್ಯವಶ್ಯಕ. ಪ್ರಯಾಣಿಕರ ಜೀವ, ದೇಶದ ಗೌರವ, ಆರ್ಥಿಕ ಭದ್ರತೆ — ಯಾವುದನ್ನೂ ಪಣಕ್ಕಿಟ್ಟು ಬಿಡಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಏನು ಬೆಳವಣಿಗೆ ಆಗುತ್ತದೋ… ಅದನ್ನೆಲ್ಲಾ ನಾವು ನಿಮಗೆ ತಲುಪಿಸುತ್ತೇವೆ. ಜೊತೆಯಲ್ಲೇ ಇರಿ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




