ಮಂಗಳೂರು: ಪತ್ರ ಬರೆದಿಟ್ಟು ನಿಗೂಢವಾಗಿ ಉದ್ಯಮಿ ಸಿದ್ಧಾರ್ಥ್ ನಾಪತ್ತೆಯಾಗಿರುವ ಪ್ರಕರಣಕ್ಕೆ ಕುರಿತಂತೆ ಕ್ಷಣಕ್ಕೊಂದು ಮಾಹಿತಿ ಲಭ್ಯವಾಗುತ್ತಿದೆ. ಐಟಿ ಡಿಜಿ ಕಿರುಕುಳ ನೀಡಿದ್ದ ಮಾಹಿತಿ ಬಹಿರಂಗವಾದ ಬೆನ್ನಲ್ಲೇ ಇದೀಗ ಸೇತುವೆ ಮೇಲಿನಿಂದ ವ್ಯಕ್ತಿಯೊಬ್ಬರು ನೀರಿಗೆ ಜಿಗಿದಿದ್ದನ್ನು ಕಣ್ಣಾರೆ ಕಂಡದ್ದಾಗಿ ಮೀನುಗಾರನೊಬ್ಬ ಮಾಹಿತಿ ನೀಡಿದ್ದಾನೆ.
ವ್ಯಾವಹಾರಿಕ ನಷ್ಟದಿಂದ ಬೇಸತ್ತು ಸುದೀರ್ಘ ಪತ್ರವೊಂದನ್ನು ಬರೆದಿಟ್ಟು ನಿಗೂಢವಾಗಿ ನಾಪತ್ತೆಯಾಗಿರುವ ಮಾಜಿ ಸಿಎಂ ಎಸ್.ಎಂ ಕೃಷ್ಣ ಅಳಿಯ ಸಿದ್ದಾರ್ಥ್ ಶೋಧಕ್ಕಾಗಿ ಮೀನುಗಾರರ ತಂಡ, ಈಜು ತಜ್ಞರು, ಕರಾವಳಿ ಭದ್ರತಾ ಪಡೆ, ಮುಳುಗು ತಜ್ಞರು ಸೇರಿದಂತೆ ತೀವ್ರ ಕಾರ್ಯಾಚರಣೆ ನಡೆದಿದೆ. ಒಂದೆಡೆ ಕಾಲ್ ಡೀಟೇಲ್ಸ್ ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ರೆ, ಮತ್ತೊಂದೆಡೆ ಒಂದೆಡೆ ಒಂದು ವೇಳೆ ಸಾಲದ ಸುಳಿಗೆ ಸಿಲುಕಿರುವ ಸಿದ್ಧಾರ್ಥ್ ಆತ್ಮಹತ್ಯೆ ದಾರಿ ಹಿಡಿದ್ರಾ ಅನ್ನೋ ಆಯಾಮದ ಮೇಲೂ ತನಿಖೆ ಚುರುಕುಗೊಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಿದ್ದಾರ್ಥ್ ಪತ್ತೆಗಾಗಿ ನದಿಯಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಈ ಮಧ್ಯೆ ಮೀನುಗಾರನೊಬ್ಬ ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಸೇತುವೆಯಿಂದ ನದಿಗೆ ಹಾರುತ್ತಿದ್ದನ್ನು ನೋಡಿದ್ದಾಗಿ ಮಾಹಿತಿ ನೀಡಿದ್ದಾನೆ. ಅಲ್ಲದೆ ತಾನು ಆ ವ್ಯಕ್ತಿಯನ್ನು ರಕ್ಷಿಸಲು ಮುಂದಾಗಿ ಸುಮಾರು 50 ಮೀಟರ್ ನಷ್ಟು ಈಜಿಕೊಂಡು ಹೋಗಿದ್ದು, ನೀರಿನ ಸೆಳೆತ ಹೆಚ್ಚಾಗಿದ್ದ ಕಾರಣ ಆತ ಆ ವ್ಯಕ್ತಿಯನ್ನು ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ ಅಂತ ಮೀನುಗಾರ ಹೇಳಿದ್ದಾನೆ. ಇನ್ನು ನಿನ್ನೆ ರಾತ್ರಿ ಇದೇ ಸಮಯದಿಂದಲೇ ಉದ್ಯಮಿ ಸಿದ್ಧಾರ್ಥ್ ನಾಪತ್ತೆಯಾಗಿರೋದು ಹಾಗೂ ಇದೀಗ ಮೀನುಗಾರ ನೀಡಿರುವ ಮಾಹಿತಿಗೂ ತಾಳೆಯಾಗುತ್ತಿರುವುದರಿಂದ ನದಿಯಲ್ಲಿ ಶೋಧ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಲಾಗಿದೆ.