ಮಂಡ್ಯ ಜಿಲ್ಲೆಯ ವಸತಿ ನಿಲಯಗಳಲ್ಲಿನ ಮೂಲಭೂತ ಸೌಲಭ್ಯಗಳನ್ನು ಪರಿಶೀಲಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಂದಿನಿ ಕೆ.ಆರ್., 60 ಪ್ರಶ್ನಾವಳಿಗಳನ್ನು ನಿಯಮಿತವಾಗಿ ಭರ್ತಿ ಮಾಡಿ ಸೌಲಭ್ಯಗಳನ್ನು ಖಚಿತಪಡಿಸಿಕೊಳ್ಳುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೂಚನೆ ನೀಡಿದರು.
ಮದ್ದೂರಿನ ಸೋಮನಹಳ್ಳಿ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿದ ಸಿಇಓ ಅವರು, ನಿಗದಿತ ಮೆನು ಪ್ರಕಾರ ಗುಣಮಟ್ಟದ, ಶುಚಿ ಮತ್ತು ರುಚಿಯಾದ ಆಹಾರ ಒದಗಿಸಬೇಕು ಹಾಗೂ ಆಹಾರ ತಪಾಸಣೆ ಕಡ್ಡಾಯವಾಗಿ ಮಾಡಿಸಬೇಕು ಎಂದು ಹೇಳಿದರು. ವಿದ್ಯಾರ್ಥಿಗಳ ಮೊಬೈಲ್ ಬಳಕೆ ಮತ್ತು ಆನ್ಲೈನ್ ಗೇಮ್ಸ್‌ಗೆ ಕಟ್ಟುನಿಟ್ಟಿನ ನಿಷೇಧ ವಿಧಿಸಲು ವಾರ್ಡನ್‌ಗಳಿಗೆ ಸೂಚನೆ ನೀಡಿದರು.
ಸಹಾಯವಾಣಿ ಸಂಖ್ಯೆ 9480872008 ಅನ್ನು ಎಲ್ಲ ವಸತಿ ನಿಲಯಗಳು ಮತ್ತು ಶಾಲೆಗಳ ಅಡುಗೆ ಕೋಣೆಗಳ ಬಳಿ ಡಿಸೆಂಬರ್ 31ರೊಳಗೆ ಪ್ರದರ್ಶಿಸಲು ನಿರ್ದೇಶನ ನೀಡಿದ್ದು, ಆಹಾರದ ಗುಣಮಟ್ಟಕ್ಕೆ ಸಂಬಂಧಿಸಿದ ಯಾವುದೇ ದೂರುಗಳನ್ನು ಈ ಸಂಖ್ಯೆಗೆ ಕರೆ ಮಾಡಿ ದಾಖಲಿಸಬಹುದು ಎಂದರು.
ಸೋಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪರಿಶೀಲನೆಯ ಸಂದರ್ಭ, 7ನೇ ತರಗತಿ ವಿದ್ಯಾರ್ಥಿಗಳು ಸಂವಿಧಾನ ಪೀಠಿಕೆಯನ್ನು ಪಾಠ ಮಾಡಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಿಇಓ, ಕನ್ನಡ ಓದಿನಲ್ಲಿ ಹಿಂದುಳಿದಿರುವ ಮಕ್ಕಳಿಗೆ ಹೆಚ್ಚುವರಿ ಮಾರ್ಗದರ್ಶನ ನೀಡಬೇಕು ಎಂದು ಶಿಕ್ಷಕರಿಗೆ ಹೇಳಿದರು. ಬಿಸಿಯೂಟ ಯೋಜನೆಯಲ್ಲಿ ಪೌಷ್ಠಿಕ ಮತ್ತು ಗುಣಮಟ್ಟದ ಆಹಾರ ಒದಗಿಸುವಂತೆ ಕೂಡ ಸೂಚನೆ ನೀಡಿದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




