ಬೆಂಗಳೂರು : ರಾಜ್ಯದಲ್ಲಿ ನಾಯಕತ್ವದ ಬದಲಾವಣೆಯ ವಿಚಾರ ಸ್ವಲ್ಪ ಸೈಲೆಂಟಾಗಿದೆ. ಸಿಎಂ ಸಿದ್ದರಾಮಯ್ಯ ತಮ್ಮ ಐದು ವರ್ಷದ ಆಡಳಿತದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ ಐದು ವರ್ಷ ನಾನೇ ಸಿಎಂ ಎಂದು ಘೋಷಿಸಿದ್ದಾರೆ. ಆದರೆ ಈ ಎಲ್ಲ ಬೆಳವಣಿಗೆಗಳ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಮೌನಕ್ಕೆ ಶರಣಾಗಿದ್ದರು.
ಇನ್ನೂ ತಮ್ಮ ಕುರ್ಚಿಗೆ ಯಾವಾಗ ಕಂಟಕ ಬರುವ ಸಂಭವ ಇರುತ್ತದೆಯೋ ಆಗ, ಸಿದ್ದರಾಮಯ್ಯ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗುತ್ತಾರೆ. ಜನರನ್ನು ಸೇರಿಸಿ ಬೃಹತ್ ಸಮಾವೇಶ ನಡೆಸುತ್ತಾರೆ. ಅದರಂತೆಯೇ ಈ ಬಾರಿಯೂ ತಮ್ಮ ತವರು ಮೈಸೂರಿನಲ್ಲಿ ಸಾಧನಾ ಸಮಾವೇಶದ ನೆಪದಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಈ ಮೂಲಕ ಹೈಕಮಾಂಡ್ ನಾಯಕರ ಎದುರು ತಮ್ಮ ಜನ ಬಲವನ್ನು ತೋರಿಸುವ ಪ್ರಯತ್ನ ಮಾಡಿದ್ದಾರೆ.
ಮೇಲ್ನೋಟಕ್ಕೆ ಅದೊಂದು ಸರ್ಕಾರಿ ಕಾರ್ಯಕ್ರಮವೆಂದು ಹೇಳಿದ್ದರೂ, ಕ್ಲೀಯರ್ ಆಗಿ ಅದು ಸಿದ್ದು ನಾಮಬಲ ಜಪಿಸುವ ಸಮಾವೇಶವಾಗಿತ್ತು ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ. ಅದರಂತೆಯೇ ಸಿಎಂ ಸಿದ್ದರಾಮಯ್ಯ ಅವರಿಂದ ಪ್ರೇರಣೆಯಂತೆ ಡಿಸಿಎಂ ಡಿಕೆ ಶಿವಕುಮಾರ್ ಕೂಡ ಇದೇ ದಾರಿ ತುಳಿದಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ ಆಯ್ತು, ಇದೀಗ ಏನಿದು ಯತ್ನಾಳ್ ಗ್ಯಾರಂಟಿ?
ಕಳೆದ ಶನಿವಾರ ಮೈಸೂರಿನ ಸಮಾವೇಶದಲ್ಲಿ ಡಿಸಿಎಂ ಭಾಗಿಯಾಗಿದ್ದರು, ಬಳಿಕ ಸೋಮವಾರವಷ್ಟೇ ತಮ್ಮ ತವರಿನಲ್ಲಿ ಕಾಣಿಸಿದ್ದರು. ಜನಸ್ಫಂದನೆ, ನಾನಾ ಅಭಿವೃದ್ದಿ ಕಾರ್ಯಕ್ರಮಗಳ ಹೆಸರಿನಲ್ಲಿ ಬೃಹತ್ ಸಮಾವೇಶ ನಡೆಸಿದ್ದರು.
ಇತ್ತೀಚಿನ ದಿನಗಳಲ್ಲಿ ಕನಕಪುರದತ್ತ ಮುಖ ಮಾಡದಿದ್ದ ಡಿಕೆಶಿ, ಇದೀಗ ದಿಢೀರ್ ಆಗಿ ಜನರೆದುರು ಬಂದಿದ್ದರು. ಸಿದ್ದರಾಮಯ್ಯ ಜನಬೆಂಬಲ ತೋರಿಸಿ ತಮ್ಮ ಸ್ಥಾನವನ್ನು ಭದ್ರ ಮಾಡಿಕೊಳ್ಳುವ ತಂತ್ರ ಹೂಡಿದ್ದರು. ಹಾಗೆಯೇ ಡಿಸಿಎಂ ಕೂಡ ಮುಂದಿನ ಕುರ್ಚಿಗೆ ಹಾದಿ ಸುಗಮವಾಗಬೇಕು. ಹೀಗಾಗಬೇಕಾದರೆ ನಮಗೆ ತವರಿನ ಜನಶಕ್ತಿ ಅತ್ಯಂತ ಅವಶ್ಯಕ ಎಂದು ಭಾವಿಸಿದ್ದಾರೆ. ತಮ್ಮ ಸಿಎಂ ಹುದ್ದೆಯ ಕನಸಿನ ಮಾರ್ಗ ಕಠಿಣ ವಾಗುತ್ತಿರುವುದನ್ನು ಅರಿತಿರುವ ಅವರು ಕ್ಷೇತ್ರದಲ್ಲಿ ಜನಬೆಂಬಲ ಮುಂದಾಗಿದ್ದರು.
ಕನಪುರದ ಕೋಡಿಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅನಾರೋಗ್ಯದ ನಡುವೆಯೇ ಡಿಕೆಶಿ ಭಾಗಿಯಾಗಿದ್ದರು. ತೆರೆದ ಜೀಪಿನಲ್ಲಿ ಬೃಹತ್ ರೋಡ್ ಶೋ ನಡೆಸಿ, ಕ್ಷೇತ್ರಕ್ಕೆ ನೂರಾರು ಕೋಟಿ ಅನುದಾನದ ಭರವಸೆ ನೀಡಿದ್ದಾರೆ. 10 ಸಾವಿಕ್ಕೂ ಅಧಿಕ ಆಶ್ರಯ ಮನೆಗಳನ್ನು ನೀಡಲಾಗುವುದು, 250ಕ್ಕೂ ಅಧಿಕ ಗ್ರಾಮಗಳಿಗೆ ನೀರು ಪೊರೈಸುವ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದು ಆಶ್ವಾಸನೆ ನೀಡಿದ್ದಾರೆ.
ದೇವರು ಮತ್ತು ಜನರು ನೀಡಿದ ಶಕ್ತಿ ಕೇತ್ರಕ್ಕಷ್ಟೇ ಬಳಕೆಯಾದರೆ ಸಾಲದು. ರಾಜ್ಯಕ್ಕೆ ಬಳಕೆಯಾಗುವಂತಾಗಬೇಕು. ನಾನು ರಾಜ್ಯ ಸುತ್ತಿ ಕೆಲಸ ಮಾಡಬೇಕೋ? ಬೇಡವೋ? ಎನ್ನುವುದನ್ನು ನೀವೇ ಹೇಳಿ ಅಂತ ಜನರ ಬಾಯಿಂದ, ತಾವು ಸಿಎಂ ಆಗಬೇಕೆಂಬ ಮಾತು ಕೇಳಲು ಸಹ ಡಿಕೆ ಶಿವಕುಮಾರ್ ಪ್ರಯತ್ನಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಹಾಗೂ ಕ್ಷೇತ್ರದಲ್ಲಿ ತಮ್ಮ ಪರವಾದ ಜನಬೆಂಬಲ ಇದೆ ಎಂಬ ಸಂದೇಶ ಹೈಕಮಾಂಡ್‌ಗೆ ಸಾರಲು ಡಿಸಿಎಂ ಪ್ಲ್ಯಾನ್ ರೂಪಿಸಿದ್ದಾರೆ ಎನ್ನಲಾಗುತ್ತಿದೆ.