RSS ವಿರುದ್ಧ ಹೇಳಿಕೆ ನೀಡಿದ್ದ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸಿಎಂ ಸಿದ್ದರಾಮಯ್ಯ ಅವರಿಗೆ ಮಹತ್ವದ ಸಲಹೆ ನೀಡಿದ್ದಾರೆ. ಇನ್ನೊಂದೆಡೆ ಬಿಜೆಪಿ ಆಫರ್ ಬಗ್ಗೆ ಡಿಕೆಶಿ ಮಾತನಾಡಿದ ಕುರಿತು ಯತ್ನಾಳ್ ಮಹತ್ವದ ಹೇಳಿಕೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಗುರುವಾರ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ. ಪ್ರಿಯಾಂಕ್ ಖರ್ಗೆ ಅವರೇ, ನಿಮಗೆ ನೂರಾರು ಕೆಲಸಗಳಿವೆ. ನೀವು RSS ವಿರೋಧಿ ಮಂತ್ರಿಯೋ? ತಾಲಿಬಾನಿ ಮಂತ್ರಿಯೋ? ಅಥವಾ ಐಟಿ-ಬಿಟಿ ಮಂತ್ರಿಯೋ? ಎಂದು ಪ್ರಶ್ನಿಸಿದ್ದಾರೆ. ಸರ್ಕಾರಿ ಶಾಲೆ-ಕಾಲೇಜುಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳ ನಿರ್ಬಂಧದ ಕುರಿತು ಸರ್ಕಾರದ ನಿಲುವಿಗೆ ಯತ್ನಾಳ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ರೀತಿಯ ಚಟುವಟಿಕೆಗಳನ್ನು ನಿಲ್ಲಿಸಲು ಸರ್ಕಾರ ಕೈಗೊಂಡಿರುವ ಕ್ರಮ ದುರುದ್ದೇಶದಿಂದ ಕೂಡಿದೆ. ಇಂತಹ ಕ್ರಮ ಕೈಗೊಳ್ಳುವ ಮಂತ್ರಿಗೆ ಪ್ರತ್ಯೇಕ ಮಂತ್ರಾಲಯವನ್ನೇ ಸೃಷ್ಟಿಸಬೇಕು. ‘ಆರ್‌ಎಸ್‌ಎಸ್ ವಿರೋಧಿ ಮಂತ್ರಾಲಯ’ ಅಥವಾ ‘ತಾಲಿಬಾನ್ ಇಲಾಖೆ’ ಸ್ಥಾಪಿಸಿ ಅವುಗಳ ಅಧೀನದಲ್ಲಿ ಪ್ರಿಯಾಂಕ್ ಖರ್ಗೆಯವರನ್ನು ನೇಮಕ ಮಾಡಬೇಕು ಎಂದು ವ್ಯಂಗ್ಯವಾಡಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಿಜೆಪಿಯಿಂದ ಆಫರ್ ಬಂದಿತ್ತು ಎಂಬ ಹೇಳಿಕೆಗೆ ಮತ್ತೆ ಬಲ ನೀಡಿದ ಯತ್ನಾಳ್, ನಾನು ಈ ಬಗ್ಗೆ ಬಹುತೇಕ ವರ್ಷಗಳ ಹಿಂದೆ ಹೇಳಿದ್ದೇನೆ. ಇಡಿ ಕೇಸ್ ಮುಕ್ತ ಮಾಡಿದ್ರೆ ಬಿಜೆಪಿಯವರ ಜೊತೆ ಸರಕಾರ ರಚನೆಗೆ ಜೋಡಿಸ್ತೇನೆ ಅಂತಾ ಹೇಳಿದ್ದಾರೆ. ಈ ಬಗ್ಗೆ ನನ್ನ ಹೇಳಿಕೆಗೆ ಕನಕಪುರ ಕೋರ್ಟ್ ನಲ್ಲಿ ಕೇಸ್ ಹಾಕಿದ್ದಾರೆ. ಆದರೆ ಈವರೆಗೂ ಒಂದು ಬಾರಿಯೂ ಹೋಗಿ ನನ್ನ ವಿರುದ್ಧ ಸಾಕ್ಷಿಹೇಳಿಲ್ಲ ಎಂದರು.
ಒಂದು ಕೋಟಿ ಖರ್ಚು ಮಾಡಿ ನನ್ನ ಮೇಲೆ 200 ಕೋಟಿ ಮಾನ ಹಾನಿಹಾಕಿದ್ದಾರೆ. ಈಗ ಸಾಕ್ಷಿಹೇಳಿ ಪ್ರಕರಣ ಮುಂದಿವರಿಸೋದು ಬಿಟ್ಟು ರಾಜೀ ಮಾಡಿಕೊಳ್ಳುವಂತೆ ಆದೇಶ ಮಾಡಿಸಿದ್ದಾರೆ. ಹಾಗಾದರೆ ಅವರು ಕೇಂದ್ರದ ಬಿಜೆಪಿ ನಾಯಕರನ್ನ ಭೇಟಿ ಮಾಡಿಲ್ಲ, ಈ ಬಗ್ಗೆ ಚರ್ಚೆ ಮಾಡಿಲ್ಲ, ಅಂತ ಸತ್ಯವಾದರೆ ಅವರು ಕೋರ್ಟ್ ಗೆ ಹೋಗಿ ಯಾಕೆ ಸಾಕ್ಷಿ ಹೇಳುತ್ತಿಲ್ಲ? ಎಂದು ಪ್ರಶ್ನಿಸಿದರು.
ತಾವು ಮುಖ್ಯಮಂತ್ರಿ ಆಗಬೇಕು ಎನ್ನುವ ಸಲುವಾಗಿ, ಹಿಂದೆ ಆಮಿಷ ಒಡ್ಡಿದ್ದರೂ ಸಹ ನಾನು ಜೈಲಿಗೆ ಹೋದರೂ, ತ್ಯಾಗ ಮಾತನ್ನ ಆಡಿದ್ದೀರಿ ಅನುಕಂಪ ಗಿಟ್ಟಿಸಿಕೊಳ್ಳಲು ಈ ರೀತಿ ಹೇಳಿದ್ದೀರಿ. ಗಾಂಧಿ ಕುಟುಂಬದ ಮೇಲೆ ಪ್ರಭಾವ ಬೀರಲು ಹೋಗಿದ್ದೀರಿ. ಈ ರೀತಿ ಸುಳ್ಳು ಆಪಾದನೆ ಮಾಡುವ ಸರ್ಕಸ್ ಮಾಡುತ್ತಿದ್ದೀರಿ ಎಂದು ಟೀಕಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ