ಜೋಳದ ದಂಟಿನಲ್ಲಿ ‘ಬೆಲ್ಲದ’ ಆವಿಷ್ಕಾರ!

ಕೃಷಿಯಲ್ಲಿ ಹೊಸತನ ಹುಟ್ಟು ಹಾಕುವ ಮೂಲಕ ಅನ್ನದಾತ ಒಂದಿಲ್ಲೊಂದು ಉತ್ಪಾದನೆ ಕಾರ್ಯ ಮಾಡುತ್ತಿದ್ದಾನೆ. ಕಬ್ಬಿನಿಂದ ‌ಬೆಲ್ಲ ತಯಾರಿಸುತ್ತಾನೆ. ಸಕ್ಕರೆ ತಯಾರಿಸುತ್ತಾನೆ. ಆದ್ರೆ ಇದು ಸಾಮಾನ್ಯ. ಇದೀಗ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಸಂಗಾನಟ್ಟಿ ಗ್ರಾಮದ ಪ್ರಗತಿಪರ ರೈತ ಮಹಲಿಂಗಪ್ಪ ಇಟ್ನಾಳ ಅವರು ಜೋಳದ ದಂಟಿನಿಂದ ಬೆಲ್ಲ ತಯಾರಿಸುವ ಹೊಸ ಅವಿಸ್ಕಾರ ಮಾಡುವ ಮೂಲಕ ವಿಶಿಷ್ಟ ಸಾಧನೆಗೈದಿದ್ದಾರೆ.

ಸರ್ಕಾರದ ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರಗಳು ಇದುವರೆಗೆ ನಡೆಸದಿದ್ದ ಸಂಶೋಧನೆಗೆ ನೈಜ ಪ್ರಯೋಗಾತ್ಮಕ ಸ್ಪರ್ಶ ನೀಡಿರುವ ಮಹಾಲಿಂಗಪ್ಪ ಅವರು ಕೃಷಿ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿದ್ದಾರೆ. ಸಾಧಾರಣ ರೈತನ ಕೈಯಲ್ಲಿ ಹೊಸ ಸಂಶೋಧನೆ ಸಾಧ್ಯ ಅನ್ನುವುದನ್ನ ಅವರು ತಮ್ಮ ಆವಿಷ್ಕಾರದಿಂದ ತೋರಿಸಿದ್ದಾರೆ.

ಸಾಧಾರಣವಾಗಿ ಜೋಳದ ದಂಟನ್ನು ದನಕರುಗಳಿಗೆ ಮೇವಾಗಿ ಅಥವಾ ಮಾರುಕಟ್ಟೆಗೆ ಹಸಿಯಾಗಿ ಮಾರಾಟ ಮಾಡುವ ಪದ್ಧತಿ ಇದೆ. ಆದರೆ ಇದರಿಂದ ರೈತರಿಗೆ ಹೆಚ್ಚಿನ ಲಾಭ ಸಿಗುತ್ತಿರಲಿಲ್ಲ. ಹಸಿ ಜೋಳದ ದಂಟಿನಿಂದ ಲಾಭವಿಲ್ಲ ಎಂಬ ಅಭಿಪ್ರಾಯ ರೈತರಲ್ಲಿ ಬೇರೂರಿತ್ತು. ಈ ಹಿನ್ನಲೆಯಲ್ಲಿ, ಜೋಳದ ದಂಟಿನಲ್ಲಿ ಅಡಗಿರುವ ಸಕ್ಕರೆ ಅಂಶವನ್ನು ಬಳಸಿಕೊಂಡು ಬೆಲ್ಲ ತಯಾರಿಸಬಹುದು ಎಂಬ ಆಲೋಚನೆಯನ್ನು ಪ್ರಯೋಗವಾಗಿ ಕೈಗೊಂಡ ಮಹಾಲಿಂಗಪ್ಪ ಯಶಸ್ಸು ಕಂಡಿದ್ದಾರೆ.

ಇತ್ತೀಚೆಗೆ ಅಭಿವೃದ್ಧಿಗೊಂಡಿರುವ ಹೊಸ ತಳಿಯ ಸಿಹಿ ಜೋಳಗಳಲ್ಲಿ ಕಡ್ಡಿಯ ಗಾತ್ರ ದೊಡ್ಡದಾಗಿದ್ದು, ಸಿಹಿಯ ಅಂಶವೂ ಹೆಚ್ಚಾಗಿದೆ. ಇದೇ ವೈಶಿಷ್ಟ್ಯವನ್ನು ಗಮನಿಸಿದ ಮಹಾಲಿಂಗಪ್ಪ ಇಟ್ನಾಳ, ಕಬ್ಬಿನಿಂದ ಬೆಲ್ಲ ತಯಾರಿಸುವ ಪರಂಪರೆಯ ವಿಧಾನವನ್ನು ಅಳವಡಿಸಿಕೊಂಡು, ಜೋಳದ ದಂಟಿನಿಂದ ಬೆಲ್ಲ ತಯಾರಿಕೆಯಲ್ಲಿ ಯಶಸ್ವಿ ಪ್ರಯೋಗ ನಡೆಸಿದ್ದಾರೆ.

ಇಲ್ಲಿವರೆಗೆ ಅಲ್ಪ ಉಪಯೋಗಕ್ಕಾಗಿ ಪರಿಗಣಿಸಲ್ಪಟ್ಟಿದ್ದ ಜೋಳದ ದಂಟನ್ನು ಮಹಾಲಿಂಗಪ್ಪ ಕಸದಿಂದಲೂ ರಸ ತೆಗೆಯಬಹುದು ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ. ಇದರಿಂದ ರೈತರು ಜೋಳದ ದಂಟನ್ನು ನಷ್ಟದ ಉತ್ಪನ್ನವೆಂದು ಪರಿಗಣಿಸುವ ಬದಲಾಗಿ, ಹೆಚ್ಚುವರಿ ಆದಾಯದ ಮೂಲವಾಗಿ ಬಳಸಿಕೊಳ್ಳುವ ಅವಕಾಶ ಸೃಷ್ಟಿಯಾಗಿದೆ.

ಇಷ್ಟು ದಿನ ರೈತರು ತಮ್ಮ ಜಾನುವಾರುಗಳಿಗೆ ಅಗತ್ಯವಾದ ಜೋಳದ ದಂಟನ್ನು ಇಟ್ಟುಕೊಂಡು ಉಳಿದಿದನ್ನು ಮಾರಾಟ ಅಥವಾ ಸುಟ್ಟು ಹಾಕುತ್ತಿದ್ದರು. ಆದರೆ ಇದೀಗ ಜೋಳ ಬೆಳೆದ 120 ದಿನಗಳ ಒಳಗಾಗಿ ಕಟಾವು ಮಾಡಿ ಪ್ರತಿ ಟನ್’ಗೆ 3000 ಲಾಭ ಗಳಿಸಬಹುದಾಗಿದೆ. ಈಗಾಗಲೇ ಜೋಳದ ದಂಟಿನಿಂದ ತಯಾರಿಸಿದ ಬೆಲ್ಲವನ್ನು ಲ್ಯಾಬ್’ನಲ್ಲಿ ಪರೀಕ್ಷೆ ಮಾಡಿಸಲಾಗಿದೆ.

ಕಬ್ಬಿನ ಬೆಲ್ಲಕ್ಕಿಂತ ಜೋಳದಿಂದ ತಯಾರಿಸಿದ ಬೆಲ್ಲ ಉತ್ತಮ ಎಂಬುದು ಸಾಭೀತಾಗಿದೆ. ಇದೇ ಅಕ್ಟೋಬರ್ 8 ರಂದು ಕೃಷಿ ವಿಜ್ಞಾನಿಗಳ ಸಮ್ಮುಖದಲ್ಲಿ ಮತ್ತೊಮ್ಮೆ ಜೋಳದ ದಂಟಿನಿಂದ ರಸ ತೆಗೆದು ಬೆಲ್ಲ ತಯಾರಿಸುವ ಮೂಲಕ ಪ್ರಾತ್ಯಕ್ಷಿಕೆ ಮಾಡಿ ತೋರಿಸಲಿದ್ದಾರೆ.

ವರದಿ : ಲಾವಣ್ಯ ಅನಿಗೋಳ

About The Author