ಅಹಮದಾಬಾದ್:ಸ್ಟಾರ್ ಅಟಗಾರ ಜೋಸ್ ಬಟ್ಲರ್ ಅವರ ಅತ್ಯದ್ಭುತ ಶತಕದ ನೆರೆವಿನಿಂದ ರಾಜಸ್ಥಾನ ರಾಯಲ್ಸ್ ಆರ್ಸಿಬಿ ತಂಡವನ್ನು ಮಣಿಸಿ ಐಪಿಎಲ್ 15ರ ಫೈನಲ್ಗೆ ಲಗ್ಗೆ ಹಾಕಿದೆ.
ಶುಕ್ರವಾರ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆರ್ಸಿಬಿ ರಾಜಸ್ಥಾನ ತಂಡಕ್ಕೆ 158 ರನ್ ಗುರಿ ನೀಡಿತು. ರಾಜಸ್ಥಾನ ಪರ ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಹಾಗೂ ಜೋಸ್ ಬಟ್ಲರ್ ಮೊದಲ ವಿಕೆಟ್ಗೆ 61 ರನ್ ಗಳ ಭರ್ಜರಿ ಜೊತೆಯಾಟ ನೀಡಿದರು.
ಜೋಸ್ ಬಟ್ಲರ್ ಆರಂಭದಿಂದಲೂ ಆರ್ಸಿಬಿ ಬೌಲರ್ಸ್ಗಳನ್ನು ಬೆಂಡೆತ್ತಿ ತಂಡದ ಸ್ಕೋರ್ ಹೆಚ್ಚಿಸುತ್ತಾ ಹೋದರು.
ಸ್ಫೋಟಕ ಬ್ಯಾಟಿಂಗ್ ಮಾಡಿದ ಜೋಸ್ ಬಟ್ಲರ್ ಕೇವಲ 23 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು. ನಂತರ ಎಚ್ಚರಿಕೆಯ ಆಟವಾಡಿ 59 ಎಸೆತದಲ್ಲಿ ಶತಕ ಸಿಡಿಸಿದರು. ಜೋಸ್ ಬಟ್ಲರ್ ಒಟ್ಟು 60 ಎಸೆತ ಎದುರಿಸಿ 10 ಬೌಂಡರಿ 6 ಸಿಕ್ಸರ್ ಸಿಡಿಸಿ ಅಜೇಯ 106 ರನ್ ಗಳಿಸಿದರು. ಜೊತೆಗೆ ಹಲವಾರು ದಾಖಲೆಗಳನ್ನು ಮುಡಿಗೇರಿಸಿಕೊಂಡರು.
ಈ ಬಾರಿಯ ಐಪಿಎಲ್ ನ ಪ್ಲೇ ಆಫ್ ನಲ್ಲಿ 2 ಶತಕಗಳು ಮೂಡಿ ಬಂದಿವೆ. ಐಪಿಎಲ್ ಇತಿಹಾಸದಲ್ಲಿ ಪ್ಲೇ ಆಫ್ ನಲ್ಲಿ 2 ಶತಕ ಮೂಡಿ ಬಂದಿರುವುದು ಇದು 2ನೇ ಬಾರಿ. ಈ ದಾಖಲೆಗಳು ಜೋಸ್ ಬಟ್ಲರ್ ಪಾಲಾಗಿದೆ.
ಪ್ಲೇ ಆಫ್ ನಲ್ಲಿ ರಾಜಸ್ಥಾನ ಪರ ಶತಕ ಸಿಡಿಸಿದ ಮೊದಲ ಬ್ಯಾಟರ್ ಜೋಸ್ ಬಟ್ಲರ್ ಅನ್ನೋ ಗೌರವಕ್ಕೂ ಪಾತ್ರರಾಗಿದ್ದಾರೆ. ಐಪಿಎಲ್ ನಲ್ಲಿ ಒಟ್ಟು 5ನೇ ಶತಕ ಸಿಡಿಸಿ ವಿರಾಟ್ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ್ದಾರೆ.
ಒಂದೇ ಋತುವಿನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಬ್ಯಾಟರ್ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ. 2016ರ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ 4 ಶತಕ ಸಿಡಿಸಿದ್ದರು.ಇದೀಗ ಈ ಆವೃತ್ತಿಯಲ್ಲಿ ಬಟ್ಲರ್ 4ನೇ ಶತಕ ಸಿಡಿಸಿ ದಾಖಲೆ ಸರಿಗಟ್ಟಿದ್ದಾರೆ.
ಐಪಿಎಲ್ ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ದಾಖಲೆ ಕೆರೆಬಿಯನ್ ಕಿಂಗ್ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಕ್ರಿಸ್ ಗೇಲ್ ಐಪಿಎಲ್ ನಲ್ಲಿ ಒಟ್ಟು 6 ಶತಕ ಸಿಡಿಸಿದ್ದಾರೆ. ಇದೀಗ ರಾಜಸ್ಥಾನ ರಾಯಲ್ಸ್ ಫೈನಲ್ ತಲುಪಿದೆ. ಒಂದು ವೇಳೆ ಭಾನುವಾರ ಗುಜರಾತ್ ಟೈಟಾನ್ಸ್ ವಿರುದ್ಧ ಫಾರ್ಮ್ ನಲ್ಲಿರುವ ಬಟ್ಲರ್ ಶತಕ ಸಿಡಿಸಿದರೆ ಗೇಲ್ ದಾಖಲೆಯೂ ಉಡೀಸ್ ಆಗೋದ್ರಲ್ಲಿ ಅನುಮಾನವೇ ಇಲ್ಲ.