ಮುಂಬೈ: ನಾಯಕ ಫಾಫ್ ಡುಪ್ಲೆಸಿಸ್ ಅವರ ಸೊಗಸಾದ ಬ್ಯಾಟಿಂಗ್ ಹಾಗೂ ವನಿಂದು ಹಸರಂಗ ಅವರ ಸ್ಪಿನ್ ಮ್ಯಾಜಿಕ್ ನೆರೆವಿನಿಂದ ಆರ್‍ಸಿಬಿ ತಂಡ ಸನ್‍ರೈಸರ್ಸ್ ವಿರುದ್ಧ 67 ರನ್‍ಗಳ ಗೆಲುವು ದಾಖಲಿಸಿಕೊಂಡಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೆ ಸ್ಥಾನಕ್ಕೇರಿದೆ.
ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆರ್‍ಸಿಬಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರ್‍ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾದರು.
ನಾಯಕ ಫಾಫ ಡುಪ್ಲೆಸಿಸ್ ಜೊತೆಗೂಡಿದ ರಜತ್ ಪಟಿದಾರ್ ತಂಡದ ಕುಸಿತ ತಡೆದರು. ಸನ್‍ರೈಸರ್ಸ್ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ಎರಡನೆ ವಿಕೆಟ್‍ಗೆ 104 ರನ್ ಸೇರಿಸಿದರು. ಬೌಂಡರಿಗಳ ಸುರಿಮಳೆಗೈದ ಫಾಫ್ ಡುಪ್ಲೆಸಿಸ್ 34 ಎಸೆತದಲ್ಲಿ ಅರ್ಧ ಶತಕ ಪೂರೈಸಿದರು.
13ನೇ ಓವರ್‍ನಲ್ಲಿ ಮತ್ತೆ ದಾಳಿಗಿಳಿದ ಸುಚಿತ್ 48 ರನ್ ಗಳಿಸಿ ಮ್ನುನಗುತ್ತಿದ್ದ ರಜತ್ ಪಡಿದಾರ್ ಅವರನ್ನು ಪೆವಿಲಿಯನ್‍ಗೆ ಅಟ್ಟಿದರು. ನಾಲ್ಕನೆ ಕ್ರಮಾಂಕದಲ್ಲಿ ಬಂದ ಗ್ಲೆನ್ ಮ್ಯಾಕ್ಸ್‍ವೆಲ್ 24 ಎಸೆತದಲ್ಲಿ 3 ಬೌಂಡರಿ 2 ಸಿಕ್ಸರ್ ನೆರೆವಿನೊಂದಿಗೆ 33 ರನ್ ಕಲೆ ಹಾಕಿದರು.
19ನೇ ಓವರ್‍ನಲ್ಲಿ ದಾಳಿಗಿಳಿದ ಕಾರ್ತಿಕ್ ತ್ಯಾಗಿ, ಮ್ಯಾಕ್ಸ್‍ವೆಲ್ ಹೊಡೆದ ಚೆಂಡನ್ನು ಏಡಿನ್ ಮಾರ್ಕ್‍ರಾಮ್‍ಗೆ ಕ್ಯಾಚ್ ಕೊಡಿಸುವಲ್ಲಿ ಯಶಸ್ವಿಯಾದರು.
ಕೊನೆಯಲ್ಲಿ ಬಂದ ದಿನೇಶ್ ಕಾರ್ತಿಕ್ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ಮೊತ್ತ 190ರ ಗಡಿ ದಾಟಿಸುವಲ್ಲಿ ನೆರವಾದರು. ಕೇವಲ 8 ಎಸೆತ ಎದುರಿಸಿದ ಕಾರ್ತಿಕ್ 1 ಬೌಂಡರಿ 4 ಸಿಕ್ಸರ್ ಚಚ್ಚಿದರು. ಫಾಫ್ ಡುಪ್ಲೆಸಿಸ್ ಅಜೇಯ 73 ರನ್ ಗಳಿಸಿದರು. ದಿನೇಶ್ ಕಾರ್ತಿಕ್ ಅಜೇಯ 30 ರನ್ ಗಳಿಸಿದರು. ಆರ್‍ಸಿಬಿ ನಿಗದಿತ 20 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 192 ರನ್ ಪೇರಿಸಿತು. ಸನ್‍ರೈಸರ್ಸ್ ಪರ ಜಗದೀಶ್ ಸುಚಿತ್ 2 ವಿಕೆಟ್ ಪಡೆದರೆ ಕಾರ್ತಿಕ್ ತ್ಯಾಗಿ 1 ವಿಕೆಟ್ ಪಡೆದರು.
193 ರನ್‍ಗಳ ಗೆಲುವಿನ ಗುರಿ ಬೆನ್ನತ್ತಿದ ಸನ್‍ರೈಸರ್ಸ್ ಆರಂಭಿಕರಾದ ಅಭಿಷೇಕ್ ಶರ್ಮಾ ಹಾಗೂ ನಾಯಕ ಕೇನ್ ವಿಲಿಯಮ್ಸನ್ ಶೂನ್ಯಕ್ಕೆ ಔಟಾದರು.ರಾಹುಲ್ ತ್ರಿಪಾಠಿ ಜೊತೆಗೂಡಿದ ಏಡಿನ್ ಮಾರ್ಕ್‍ರಾಮ್ ಚೇತರಿಕೆಯ ಆಟ ಪ್ರದರ್ಶಿಸಿದರು. ಆದರೆ ಈ ವೇಳೆ ದಾಳಿಗಿಳಿದ ವನಿಂದು ಹಸರಂಗ ಏಡಿನ್ ಮಾರ್ಕ್‍ರಾಮ್ ಅವರನ್ನು ಬಲಿಪಡೆದರು.
ನಂತರ 13ನೇ ಓವರ್‍ನಲ್ಲಿ ದಾಳಿಗಿಳಿದ ವನಿಂದು ಹಸರಂಗ 19 ರನ್ ಗಳಿಸಿದ್ದ ನಿಕೊಲೊಸ್ ಪೂರಾನ್‍ಗೂ ಪೆವಲಿಯನ್ ದಾರಿ ತೋರಿಸಿದರು. 15ನೇ ಓವರ್‍ನಲ್ಲಿ ಮತ್ತೆ ದಾಳಿಗಿಳಿದ ಹಸರಂಗ, ಜಗದೀಶ್ ಸುಚಿತ್ (2),ಶಶಾಂಕ್ ಸಿಂಗ್ (8) ಔಟ್ ಮಾಡಿದರು. ಉಮ್ರಾನ್ ಮಲ್ಲಿಕ್ ಎಲ್‍ಬಿ ಬಲೆಗೆ ಬಿದ್ದರು.
ಭುವನೇಶ್ವರ್ ಕುಮಾರ್ 8, ಫಾರೂಕಿ ಅಜೇಯ 2 ರನ್ ಗಳಿಸಿದರು. ಸನ್‍ರೈಸರ್ಸ್ 19.2 ಓವರ್‍ಗಳಲ್ಲಿ 125 ರನ್‍ಗೆ ಸರ್ವ ಪತನ ಕಂಡಿತು. ಆರ್‍ಸಿಬಿ ಪರ ಸ್ಪಿನ್ನರ್ ವನಿಂದು ಹಸರಂಗ ಕೇವಲ 18 ರನ್ ನೀಡಿ 5 ವಿಕೆಟ್ ಪಡೆದರು. ಜೋಶ್ ಹೆಜ್ಲ್‍ವುಡ್ 2, ಹರ್ಷಲ್ ಪಟೇಲ್ ಹಾಗೂ ಗ್ಲೆನ್ ಮ್ಯಾಕ್ಸ್‍ವೆಲ್ ತಲಾ 1 ವಿಕೆಟ್ ಪಡೆದರು. ವನಿಂದು ಹಸರಂಗ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
3ನೇ ಬಾರಿ ಕೊಹ್ಲಿ ಗೋಲ್ಡನ್ ಡಕ್
ರನ್ ಮಷೀನ್ ವಿರಾಟ್ ಕೊಹ್ಲಿ ಪ್ರಸಕ್ತ ಐಪಿಎಲ್‍ನಲ್ಲಿ ಮೂರನೆ ಬಾರಿಗೆ ಗೋಲ್ಡನ್ ಡಕ್ ಔಟ್ ಆಗಿದ್ದಾರೆ. ಈ ವರ್ಷ Áರ್ಮ್ ಸಮಸ್ಯೆ ಎದುರಿಸುತ್ತಿರುವ ವಿರಾಟ್ ನಿನ್ನೆ ಸನ್‍ರೈಸರ್ಸ್ ವಿರುದ್ಧ ಮೊದಲ ಎಸೆತದಲ್ಲೆ ಪೆವಲಿಯನ್ ಸೇರಿದರು.
ಸಂಕ್ಷಿಪ್ತ ಸ್ಕೋರ್
ಆರ್‍ಸಿಬಿ 192 /3
ಫಾಫ್ ಡುಪ್ಲೆಸಿಸ್ ಅಜೇಯ 73,ರಜತ್ ಪಟಿದಾರ್ 48
ಜಗದೀಶ್ ಸುಚಿತ್ 2, ಕಾರ್ತಿಕ್ ತ್ಯಾಗಿ 1
ಸನ್‍ರೈಸರ್ಸ್ 125 (19.2 ಓವರ್)
ರಾಹುಲ್ ತ್ರಿಪಾಠಿ 58, ಏಡಿನ್ ಮಾರ್ಕ್‍ರಾಮ್ 21
ವನಿಂದು ಹಸರಂಗ 5, ಹೆಜ್ಲ್‍ವುಡ 2 ವಿಕೆಟ್