ಇರಾನ್-ಇಸ್ರೇಲ್ ಯುದ್ಧ ಎಫೆಕ್ಟ್; ನಂದಿನಿ ಹಾಲಿನ ಬೇಡಿಕೆ ಕುಸಿತ!

ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಪರಿಣಾಮ ಇದೀಗ ಜಾಗತಿಕ ವ್ಯಾಪಾರ ಮಾರ್ಗಗಳಿಂದ ಹಿಡಿದು ಭಾರತೀಯ ಅಡುಗೆ ಮನೆಗಳವರೆಗೂ ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತಿದೆ. ಹೋಟೆಲ್ ಹಾಗೂ ಆಹಾರ ಉದ್ಯಮಗಳಿಗೆ ಇಂತಹ ಅನಿಶ್ಚಿತತೆಗಳು ಹೊಸದಲ್ಲವಾದರೂ, ಈ ಬಾರಿ ಅದರ ಪರಿಣಾಮ ಹೆಚ್ಚು ತೀಕ್ಷ್ಣವಾಗಿದೆ.

ಗ್ಯಾಸ್‌ ಕೊರತೆ ಮನೆ, ಹೋಟೆಲ್‌ ಮಾತ್ರವಲ್ಲದೇ ರಾಜ್ಯದ ಅತಿದೊಡ್ಡ ಡೈರಿ ಜಾಲವಾದ ನಂದಿನಿ ಬ್ರ್ಯಾಂಡ್‌ಗೂ ತಟ್ಟಿದ್ದು, ಹಾಲು ಒಕ್ಕೂಟದ ಬೇಡಿಕೆ-ಪೂರೈಕೆ ಸರಪಳಿಯನ್ನು ಅಡ್ಡಿಪಡಿಸಿದೆ. ಬೆಂಗಳೂರಿನ ಕೆಲವು ಹೋಟೆಲ್ ಮಾಲೀಕರ ಪ್ರಕಾರ, ಬೆಂಗಳೂರಿನಾದ್ಯಂತ ಹಲವಾರು ಹೋಟೆಲ್‌ಗಳು ತಮ್ಮ ಹಾಲು ಸಂಗ್ರಹಣೆಯನ್ನು ಸುಮಾರು 25% ರಷ್ಟು ಕಡಿತಗೊಳಿಸಿವೆ. ಈ ಕಡಿತವು ನಗರದಲ್ಲಿ KMFನ ಮಾರಾಟದ ಪ್ರಮಾಣವನ್ನು ನೇರವಾಗಿ ಪರಿಣಾಮ ಬೀರಿದೆ.

ಸಂಜೆ ಹೊತ್ತಿಗೆ ದೋಸೆ, ಬಜ್ಜಿ, ವಡೆ ಜೊತೆ ಕಾಫಿ ಕುಡಿಯಲು ಗ್ರಾಹಕರು ಬರುತ್ತಿದ್ದರು, ಆದ್ರೆ ಹೋಟೆಲ್‌ಗಳು ಹೆಚ್ಚು ಗ್ಯಾಸ್‌ ಬಳಸಿ ಮಾಡುವ ತಿಂಡಿಗಳನ್ನು ತಯಾರಿಸುವ ಪ್ರಮಾಣವನ್ನು ಕಡಿಮೆ ಮಾಡಿರುವುದರಿಂದ ಗ್ರಾಹಕರು ಹೋಟೆಲ್‌ಗಳಿಗೆ ಬರೋದು ಇಳಿಕೆಯಾಗಿದೆ.

ಹೋಟೆಲ್ ನಿರ್ವಾಹಕರು ಹೇಳುವಂತೆ ಈ ಕುಸಿತವು ಗ್ರಾಹಕರ ಸಂಖ್ಯೆಯಲ್ಲಿನ ಇಳಿಕೆಗೆ ಸಂಬಂಧಿಸಿದೆ. ಕಡಿಮೆ ಜನರು ಹೊರಗೆ ಊಟ ಮಾಡುವುದು ಅಥವಾ ತಿನಿಸುಗಳಿಗೆ ಭೇಟಿ ನೀಡುವುದರಿಂದ, ಚಹಾ, ಕಾಫಿ ಮತ್ತು ಇತರ ಪಾನೀಯಗಳಂತಹ ಹಾಲು ಆಧಾರಿತ ವಸ್ತುಗಳಿಗೆ ಬೇಡಿಕೆ ಕಡಿಮೆಯಾಗಿದೆ, ಇದು ದೈನಂದಿನ ಬಳಕೆಯಲ್ಲಿನ ಇಳಿಕೆಗೆ ಕಾರಣವಾಗಿದೆ.

ವರದಿ : ಲಾವಣ್ಯ ಅನಿಗೋಳ

 

About The Author