ಸಿಲಿಕಾನ್ ಸಿಟಿಯಲ್ಲಿ ಅಭಿವೃದ್ಧಿಯ ಜೊತೆಗೆ, ಸಮಸ್ಯೆಗಳು ಸಹ ಹೆಚ್ಚಾಗುತ್ತಿವೆ. ಇದೀಗ ಬೆಂಗಳೂರಿನ ಅಭಿವೃದ್ಧಿಗಾಗಿ ಬೆಂಗಳೂರು ಪ್ರದೇಶವನ್ನು ಐದು ಮಹಾನಗರಗಳನ್ನಾಗಿ ವಿಭಜನೆ ಮಾಡಲಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಕನ್ನಡಿಗರಿಗೆ ಸಮಸ್ಯೆ ಆಗಲಿದೆ ಎನ್ನುವ ಚರ್ಚೆ ಜೋರಾಗಿದೆ. ನಿನ್ನೆ ರಾಜ್ಯ ಸರ್ಕಾರವು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಥವಾ ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ ಅಂಗೀಕಾರವಾದ ಬೆನ್ನಲ್ಲೆ, ಈ ವಿಚಾರವಾಗಿ ಭಾರೀ ಚರ್ಚೆ ಶುರುವಾಗಿದೆ.
2025ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕಕ್ಕೆ, ವಿಧಾನಸಭೆಯಲ್ಲಿ ಅಂಗೀಕಾರ ದೊರಕಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ಸರ್ಕಾರದ ಹಸ್ತಕ್ಷೇಪ ಇಲ್ಲ ಎಂಬ ಸ್ಪಷ್ಟನೆಗೆ ತಿದ್ದುಪಡಿ ತರಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಕರ್ನಾಟಕ ವಿಧಾನಸಭೆಯಲ್ಲಿ ಹೇಳಿದ್ದಾರೆ. ಆದರೆ, ಐದು ಹೊಸ ನಗರ ಪಾಲಿಕೆಗಳ ರಚನೆಯಿಂದಾಗಿ ಬೆಂಗಳೂರಿನ ವಿವಿಧ ಪ್ರದೇಶಗಳ ಅಭಿವೃದ್ಧಿಗೆ ಹಿನ್ನಡೆ ಆಗಲಿದೆ. ಅಲ್ಲದೇ ತೆರಿಗೆ ಸಂಗ್ರಹದಲ್ಲಿ ಲೋಪವಾಗಲಿದೆ ಹಾಗೂ ಕನ್ನಡಿಗರಿಗೆ ಅನ್ಯಾಯವಾಗಲಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಹೇಳಿದ್ದಾರೆ.
ಈ ಸಂಬಂಧ ಅವರು ಕರ್ನಾಟಕ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಗಳಿಗೆ ಪತ್ರವನ್ನೂ ಬರೆದಿದ್ದಾರೆ. ಈಗ ಬೆಂಗಳೂರಿನಲ್ಲಿ ರಚಿಸಿರುವ 5 ಪಾಲಿಕೆಗಳಿಂದ ಕೆಲವು ಪಾಲಿಕೆಗಳ ಆಡಳಿತದಲ್ಲಿ ಕನ್ನಡ ಭಾಷೆ ಕಣ್ಮರೆಯಾಗುವ ಸಾಧ್ಯತೆಗಳು ಜಾಸ್ತಿ ಕಾಣಿಸುತ್ತಿವೆ. ಇದರಿಂದ ಮುಂದಿನ ದಿನಗಳಲ್ಲಿ ಕಾನೂನು ಸುವ್ಯವಸ್ಥೆಗಳು ಹಾಳಾಗುವ ಸಂಭವವಿರುತ್ತೆ. ಈಗ ರಚಿಸಿರುವ 5 ಪಾಲಿಕೆಗಳಿಂದ ಕೆಲವು ಪಾಲಿಕೆಗಳು ಆರ್ಥಿಕ ಹಿನ್ನಡೆ, ಕೆಲವು ಪಾಲಿಕೆಗಳು ಆರ್ಥಿಕವಾಗಿ ಸದೃಢವಾಗುತ್ತವೆ. ಇದರಿಂದ ಸಮಗ್ರ ಬೆಂಗಳೂರು ಅಭಿವೃದ್ಧಿಗೆ ತೊಂದರೆಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ವಿವಿಧ ಭಾಷೆಯವರ ಪ್ರಭಾವ ಇದೆ. ಬೆಂಗಳೂರು ಮಹಾನಗರ ಪಾಲಿಕೆಯನ್ನು, ಐದು ಭಾಗಗಳಾಗಿ ಮಾಡುವುದರಿಂದಾಗಿ ಕನ್ನಡಿಗರಿಗೆ ಹಿನ್ನಡೆ ಆಗಲಿದೆ. ಅಲ್ಲದೇ ಕನ್ನಡಿಗರು ತಮ್ಮ ಅಸ್ತಿತ್ವ ಹಾಗೂ ಅಧಿಕಾರವನ್ನು ಕಳೆದುಕೊಳ್ಳಲಿದ್ದಾರೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಎಲ್ಲಾ ವಿರೋಧಗಳ ನಡುವೆಯೂ ಈ ತಿದ್ದುಪಡಿಯನ್ನು ಕರ್ನಾಟಕ ವಿಧಾನಸಭೆಯಲ್ಲಿ ಅಂಗೀಕಾರ ಮಾಡಲಾಗಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ