ಟೀಕೆಗಳು ನನ್ನನ್ನು ಕುಗ್ಗಿಸಲ್ಲ ಅಂತ ಭವಿಷ್ಯದ ಸಂದೇಶ ಕೊಟ್ರಾ DK?

ಬೇರೆಯವರಿಗಿಂತ ನನ್ನ ಸ್ವಂತ ಜನರು, ಸ್ವಂತ ಜಾತಿಯವರೇ ನನ್ನನ್ನು ಹೆಚ್ಚು ಟೀಕೆ ಮಾಡುತ್ತಿದ್ದಾರೆ. ಹಿಂದೆ–ಮುಂದಿನಿಂದ ಚಾಕು ಹಾಕುತ್ತಿದ್ದಾರೆ. ನಾನು ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದವನಲ್ಲ. ಆದರೂ ಈ ಮಟ್ಟಕ್ಕೆ ಬಂದಿದ್ದೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.

ಫಸ್ಟ್ ಸರ್ಕಲ್ ಸೊಸೈಟಿ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ 4ನೇ ಆವೃತ್ತಿಯ ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ ಎಕ್ಸ್‌ಪೋ–2026 ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದ ಅವರು, ರಾಜಕೀಯದಲ್ಲಿ ಟೀಕೆ ಸಹಜ. ಅದಕ್ಕೆ ತಲೆಕೆಡಿಸಿಕೊಳ್ಳದೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ನಾನು ವಯಸ್ಸಿನಲ್ಲಿ ಚಿಕ್ಕವನಾಗಿದ್ದರೂ ಅನುಭವ ದೊಡ್ಡದು. ನನ್ನ ಜಾತಿಯವರಿಂದಲೇ ಟೀಕೆಗಳು ಬರುತ್ತಿವೆ. ಆದರೆ, ರಾಜಕೀಯದಲ್ಲಿ ಇದು ಹೊಸದೇನಲ್ಲ. ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ನಾನು ಎಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೆ ಎಂಬುದು ನನ್ನ ಆತ್ಮಸಾಕ್ಷಿಗೆ ಗೊತ್ತು. ಆದರೂ ನನ್ನ ವಿರುದ್ಧ ‘ಬೆನ್ನಿಗೆ ಚೂರಿ ಹಾಕಿದರು’ ಎಂಬ ಆರೋಪ ಮಾಡಲಾಯಿತು.

ನನಗೆ ಯಾರ ಪ್ರಮಾಣಪತ್ರವೂ ಬೇಡ. ನನ್ನ ಆತ್ಮಸಾಕ್ಷಿಯನ್ನು ನಾನು ಮೆಚ್ಚಿಸಿದರೆ ಸಾಕು ಎಂದು ಡಿಕೆಶಿ ಹೇಳಿದರು. ವಿಧಾನಸಭೆ ಅಧಿವೇಶನದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹೇಳಿದ್ದ ಮಾತನ್ನು ಸ್ಮರಿಸಿದ ಡಿಕೆಶಿ, ಯಶಸ್ಸು ಸಾಧಿಸಲು ಧರ್ಮರಾಯನ ಧರ್ಮತ್ವ, ಕರ್ಣನ ದಾನತ್ವ, ಅರ್ಜುನನ ಗುರಿ, ವಿದುರನ ನೀತಿ, ಭೀಮನ ಬಲ ಮತ್ತು ಕೃಷ್ಣನ ತಂತ್ರ ಅಗತ್ಯ. ಇವೆಲ್ಲ ಇದ್ದಾಗ ಮಾತ್ರ ಬದುಕಿನಲ್ಲಿ ಯಶಸ್ಸು ಸಾಧ್ಯ ಎಂದರು.

ವರದಿ : ಲಾವಣ್ಯ ಅನಿಗೋಳ

About The Author