ನಾಗಮಂಗಲದಲ್ಲಿ ದೆವ್ವ ಕಾಣಿಸಿಕೊಂಡಿದೆಯಾ? ಬೈಕ್ ಸವಾರನಿಗೆ ದೆವ್ವ ತೋರಿಸಿತ್ತಂತೆ! ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಆದರೆ, ಪೊಲೀಸರ ಫ್ಯಾಕ್ಟ್ ಚೆಕ್ ನಡೆಸಿದ ಬಳಿಕ ಬಯಲಾಯ್ತು ವಿಡಿಯೋ ಹಿಂದೆ ಇರುವ ನಿಜವಾದ ಕಥೆ.
ನಾಗಮಂಗಲ ತಾಲ್ಲೂಕಿನ ದೇವಲಾಪುರ ಹ್ಯಾಂಡ್‌ಪೋಸ್ಟ್ ಬಳಿ, ಮಧ್ಯರಾತ್ರಿ ಬೈಕ್ ಸವಾರನಿಗೆ ದೆವ್ವ ಕಾಣಿಸಿಕೊಂಡಂತಿರುವ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಆಗಿ ಕ್ಷಣಾರ್ಧದಲ್ಲಿ ವೈರಲ್ ಆಯ್ತು. ವಿಡಿಯೋ ನೋಡಿ ಆ ರಸ್ತೆಯಲ್ಲಿ ಓಡಾಡಲು ಜನವೇ ಹೆದರಿ ಹೋದ್ರು.
ಆದರೆ ನಿಜ ತನಿಖೆ ನಡೆಸಿದ ನಾಗಮಂಗಲ ಪೊಲೀಸರು ವಿಡಿಯೋ ಹಿಂದೆ ದೆವ್ವವಲ್ಲ, ಮಾನವನೇ ಇದ್ದಾನೆ ಎಂದು ಪತ್ತೆ ಹಚ್ಚಿದರು. ಫ್ಯಾಕ್ಟ್‌ಚೆಕ್ ಬಳಿಕ ವಿಡಿಯೋ ಸಂಪೂರ್ಣ ಫೇಕ್ ಎಂದು ಸ್ಪಷ್ಟವಾಯಿತು. ಈ ವಿಡಿಯೋವನ್ನು ಎಡಿಟ್ ಮಾಡಿ ಪೋಸ್ಟ್ ಮಾಡಿದ ವ್ಯಕ್ತಿ ನಾಗಮಂಗಲ ಟೌನ್‌ನ ನಿವಾಸಿ ಗೋಪಿ ಎಂದು ಪೊಲೀಸರು ಗುರುತಿಸಿದರು. ಲೈಕ್ಸ್‌ಗಳು ಮತ್ತು ವೀವ್ಸ್‌ಗಾಗಿ ಆತ ಪ್ರೇತಾತ್ಮದ ವಿಡಿಯೋ ಎಂಬ ನಾಟಕವನ್ನೇ ಸೃಷ್ಟಿಸಿದ್ದಾನೆ ಎಂದು ತನಿಖೆಯಲ್ಲಿ ಬಯಲಾಯಿತು.
ಗೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಪೊಲೀಸರು ಅವನ ತಪ್ಪೊಪ್ಪಿಗೆ ವಿಡಿಯೋವನ್ನೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಫೇಕ್ ವಿಡಿಯೋಗಳನ್ನು ನಂಬಿ ಭಯ ಪಡಬೇಡಿ. ಇಂತಹ ವಿಡಿಯೋಗಳನ್ನು ಹಂಚುವುದು ಕಾನೂನು ಕ್ರಮಕ್ಕೆ ದಾರಿ ಮಾಡಬಹುದು ಎಂದು ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ನಾಗಮಂಗಲದ ದೆವ್ವ ಕಥೆ ಕೊನೆಗೆ ನಿಜಕ್ಕೂ ಮಾನವನ ಕೃತ್ಯ ಎಂದು ಸಾಬೀತಾದ್ದರಿಂದ, ಈಗ ಅಲ್ಲಿನ ಜನರು ದೆವ್ವದ ಕಾಟಕ್ಕಿಂತ ಫೇಕ್ ನ್ಯೂಸ್ ಕಾಟಕ್ಕೇ ಹೆಚ್ಚು ಹೆದರುತ್ತಿದ್ದಾರೆ…
ವರದಿ: ರಂಜಿತ ರೇವಣ್ಣ ನಾಟನಹಳ್ಳಿ