ಹಾಸನದಲ್ಲಿ ನಡೆದಿರುವ ಭೀಕರ ದುರಂತ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಟ್ರಕ್ ಡಿಕ್ಕಿಯಿಂದ 9 ಮಂದಿ ಪ್ರಾಣ ಬಿಟ್ಟಿದ್ದಾರೆ. ಈ ದುರಂತಕ್ಕೆ ಕಾರಣನಾದ ಚಾಲಕ ಭುವನೇಶ್ ಕಂಡಾಗ ಜನರ ರಕ್ತ ಕುದ್ದು, ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳೀಯರು ಚಾಲಕನನ್ನು ಹಿಡಿದು ಹಿಗ್ಗಾ ಮುಗ್ಗಾ ಥಳಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಅಪಘಾತದ ಸಮಯದಲ್ಲಿ ಆತ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ ಎನ್ನಲಾಗಿದೆ. ಭುವನೇಶ್ ಡ್ರಿಂಕ್ ಅಂಡ್ ಡ್ರೈವ್ ಮಾಡಿದ್ದರಿಂದಲೇ ಈ ದುರಂತ ನಡೆದಿದೆ ಎಂದು ಆರೋಪಿಸಿದ್ದಾರೆ.
ಈ ಘಟನೆ ಬಳಿಕ ಸ್ಥಳೀಯರು ಮಾತ್ರವಲ್ಲ, ರಾಜ್ಯದ ಹಲವೆಡೆ ಜನರು ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಅಜಾಗರೂಕ ಚಾಲಕರಿಗೆ ಕಟ್ಟುನಿಟ್ಟಿನ ಶಿಕ್ಷೆ ಕೊಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದು, ತನಿಖೆ ಕೂಡ ವೇಗವಾಗಿ ಮುಂದುವರಿಯುತ್ತಿದೆ.
ಚಾಲಕ ಭುವನೇಶ್ ವಿರುದ್ಧ ಗೊರೂರು ಠಾಣೆಯಲ್ಲಿ ಹಲವು ಗಂಭೀರ ಆರೋಪಗಳಡಿ ಎಫ್‌ಐಆರ್ ದಾಖಲಾಗಿದೆ. BNS 281, 106 (1), 125 A ಮತ್ತು 125 B ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅವುಗಳಲ್ಲಿ ನಿರ್ಲಕ್ಷ್ಯದಿಂದ ಪ್ರಾಣಹಾನಿ, ಅತಿವೇಗ ಚಾಲನೆ, ಜೀವಕ್ಕೆ ಅಪಾಯ ಉಂಟುಮಾಡುವುದು ಮುಂತಾದ ಪ್ರಕರಣಗಳು ಸೇರಿವೆ.
ಹೊಸ BNS ಕಾಯ್ದೆಗಳ ಪ್ರಕಾರ, ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿ ಸಾವಿಗೆ ಕಾರಣರಾದರೆ 106 (1) ಅಡಿಯಲ್ಲಿ ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು. ಅತಿವೇಗ ಅಥವಾ ಅಜಾಗರೂಕ ಚಾಲನೆ ಮಾಡಿದರೆ BNS 281 ಅಡಿಯಲ್ಲಿ 6 ತಿಂಗಳವರೆಗೆ ಶಿಕ್ಷೆ ಮತ್ತು ದಂಡ. ಜೀವಕ್ಕೆ ಅಪಾಯ ಉಂಟು ಮಾಡಿದರೆ 125 A, 125 B ಅಡಿಯಲ್ಲಿ ಗರಿಷ್ಠ 3 ವರ್ಷದವರೆಗೆ ಶಿಕ್ಷೆ ವಿಧಿಸಲಾಗುತ್ತದೆ. ಇನ್ನು ಚಾಲಕ ಮದ್ಯಪಾನ ಮಾಡಿ ಟ್ರಕ್ ಚಲಾಯಿಸಿದ್ರೆ ಕಠಿಣ ಶಿಕ್ಷೆಯಾಗಲಿದೆ. ಮದ್ಯಪಾನದ ಆರೋಪ ಸಾಬೀತಾದ್ರೆ BNS 106 ಕಾಯ್ದೆಯಡಿ 5 ವರ್ಷ ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ. ಅಂದರೆ, ಭುವನೇಶ್‌ಗೆ ಕಾನೂನಿನ ಪ್ರಕಾರ ಗಂಭೀರ ಶಿಕ್ಷೆ ಆಗುವ ಸಾಧ್ಯತೆ ಹೆಚ್ಚಾಗಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ




