ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆ ಚರ್ಚೆಗಳು ತೀವ್ರಗೊಳ್ಳುತ್ತಿವೆ. ಈ ನಡುವೆ ಡಿಕೆ ಬ್ರದರ್ಸ್ ಚಟುವಟಿಕೆ ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಶನಿವಾರವೇ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ್ದರೆ, ಇಂದು ಮಾಜಿ ಸಂಸದ ಡಿಕೆ ಸುರೇಶ್ ಸಹ ರಾಜಧಾನಿ ದೆಹಲಿಗೆ ಪ್ರಯಾಣಿಸುತ್ತಿದ್ದಾರೆ.
ದೆಹಲಿಗೆ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಡಿಕೆ ಸುರೇಶ್ ಮಾತನಾಡಿದ್ದಾರೆ. ನನ್ನ ಅಣ್ಣ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎಂದು ನಾನು ಹಲವು ಬಾರಿ ಹೇಳಿದ್ದೇನೆ. ಆದರೆ ಅಂತಿಮ ತೀರ್ಮಾನ ಪಕ್ಷದ ಹೈಕಮಾಂಡ್‌ದ್ದೇ. ಸಿಎಂ, ಸಂಪುಟ ಅಥವಾ ಶಿವಕುಮಾರ್ ಕುರಿತು ಏನೇ ನಿರ್ಧಾರ ಇದ್ರೂ ಅದು ಹೈಕಮಾಂಡ್ ಕೈಯಲ್ಲಿದೆ ಎಂದು ತಿಳಿಸಿದರು.
ಸಂಪುಟ ಪುನಾರಚನೆ ನಡೆದರೂ ನಾಯಕತ್ವ ಬದಲಾವಣೆಯಾಗುವುದಿಲ್ಲ ಎಂಬ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದ್ದಾರೆ. ಅದರ ಬಗ್ಗೆ ನನಗೆ ಸ್ಪಷ್ಟ ಮಾಹಿತಿ ಇಲ್ಲ. ಪಕ್ಷದ ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆಯೋ ಅದು ಅಂತಿಮ. ಬೇರೆ ಯಾರಿಗೂ ಅಧಿಕಾರವಿಲ್ಲ ಎಂದು ಹೇಳುವ ಮೂಲಕ ನಾಯಕತ್ವ ಬದಲಾವಣೆ ಸಾಧ್ಯತೆಗಳ ಬಗ್ಗೆ ಹೊಸ ಸಂಶಯ ಮೂಡಿಸಿದರು.
ನನಗೆ ಬೇರೆ ಕೆಲಸ ಇರುವುದರಿಂದ ನಾಳೆ ದೆಹಲಿಗೆ ಹೋಗುತ್ತಿದ್ದೇನೆ. ನಾನು ದೆಹಲಿಗೆ ಆಗಾಗ ಹೋಗುತ್ತಿರುತ್ತೇನೆ. ಅವಕಾಶ ಸಿಕ್ಕರೆ ಪಕ್ಷದ ನಾಯಕರನ್ನೂ ಭೇಟಿ ಮಾಡುತ್ತೇನೆ ಎಂದು ಡಿಕೆ ಸುರೇಶ್ ಸ್ಪಷ್ಟಪಡಿಸಿದರು. ಚುನಾವಣೆಗೆ ಮುನ್ನವೇ ಜನರು ತಮ್ಮ ತೀರ್ಪು ನೀಡಿದ್ದಾರೆ. ಗೆಲುವು-ಸೋಲು ರಾಜಕೀಯದಲ್ಲಿ ಸಾಮಾನ್ಯ. ಪಕ್ಷಕ್ಕೆ ಇದು ಹೊಸದೇನೂ ಅಲ್ಲ ಎಂದು ಬಿಹಾರ ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡಿದ್ದಾರೆ.
ವರದಿ : ಲಾವಣ್ಯ ಅನಿಗೋಳ

