ಡಿಸಿಎಂ ಡಿಕೆ ಶಿವಕುಮಾರ್ ಅವರ ಬಳಿಕ ಗೃಹ ಸಚಿವ ಪರಮೇಶ್ವರ್ ಅವರು ಕಾಂಗ್ರೆಸ್ ನಾಯಕರ ಸಿಟ್ಟಿಗೆ ಗುರಿಯಾಗಿದ್ದಾರೆ. ರಾಜ್ಯ ರಾಜಕೀಯದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಎಬಿವಿಪಿ ರಥಯಾತ್ರೆಯಲ್ಲಿ ಭಾಗವಹಿಸಿದ್ದಾರೆ ಎಂಬ ಚರ್ಚೆಗಳು ಶುರುವಾಗಿದ್ದವು. ಇದಕ್ಕೆ ಖುದ್ದು ಪರಮೇಶ್ವರ್ ಅವರೇ ನಾನು ಶುದ್ಧವಾದ ಕಾಂಗ್ರೆಸಿಗನಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನು ದಾರಿಯಲ್ಲಿ ಬರುತ್ತಿದ್ದಾಗ ರಾಣಿ ಅಬ್ಬಕ್ಕ ಮೆರವಣಿಗೆ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಸ್ಥಳೀಯ ಶಾಸಕ ಷಡಕ್ಷರಿ ನನ್ನ ಜೊತೆಗಿದ್ದರು. ನಾವು ಕೇವಲ ಹೂಹಾಕಿ ಬಂದಿದ್ದೇವೆ. ಅದನ್ನು ಎಬಿವಿಪಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಎಂದು ತಿರುಚಿ ಅರ್ಥ ಮಾಡಿಕೊಳ್ಳುವುದು ಸರಿಯಲ್ಲಎಂದರು.
ಇದರ ಬಗ್ಗೆ ಯಾರಾದರೂ ವಿವಾದ ಮಾಡಬೇಕೆಂದರೆ ಮಾಡಲಿ. ನನಗೆ ಯಾವುದೇ ತೊಂದರೆ ಇಲ್ಲ. ನನ್ನ ಸೈದ್ದಾಂತಿಕ ಬದ್ಧತೆಯನ್ನು ಯಾರೂ ಪ್ರಶ್ನಿಸಲು ಆಗುವುದಿಲ್ಲ. ನಾನು ನಿಜವಾದ ಕಾಂಗ್ರೆಸ್‌ನವನಷ್ಟೇ. ಬದುಕಿದ್ದು ಕಾಂಗ್ರೆಸ್‌ನವನಾಗಿಯೇ, ಸಾಯುವಾಗಲೂ ಕಾಂಗ್ರೆಸ್‌ನವನಾಗಿಯೇ, ಎಂದು ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ರಾಜಕೀಯ ವಿರೋಧಿಗಳಿರುತ್ತಾರೆ. ಅವರು ಇಂತಹ ಸುಳ್ಳು ಪ್ರಚಾರ ಮಾಡಬಹುದು. ಪಕ್ಷದೊಳಗೂ ಕೆಲವರು ಇಂತಹ ಗಿಮಿಕ್‌ಗಳನ್ನು ಮಾಡುವ ಸಾಧ್ಯತೆ ಇದೆ. ಆದರೆ ಜನರಿಗೆ ಎಲ್ಲವೂ ಗೊತ್ತಿದೆ. ಪರಮೇಶ್ವರ್ ಯಾರು ಎಂಬುದು ಇಡೀ ರಾಜ್ಯಕ್ಕೇ ತಿಳಿದಿದೆ ಎಂದು ತಿರುಗೇಟು ನೀಡಿದರು. ನಾನು ಕಳೆದ 35 ವರ್ಷಗಳಿಂದ ರಾಜಕೀಯದಲ್ಲಿ ಇದ್ದೇನೆ. ನನ್ನ ಬದ್ಧತೆ ಏನು ಎಂಬುದು ಜನತೆಗೆ ಚೆನ್ನಾಗಿ ಗೊತ್ತಿದೆ. ಅದನ್ನು ಪ್ರತಿಸಾರಿ ಸಾಬೀತು ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಿಟಿ ರವಿಯ ವಿರುದ್ಧ ದಾಖಲಾದ ಎಫ್‌ಐಆರ್ ಕುರಿತು ಮಾತನಾಡಿದ ಪರಮೇಶ್ವರ್ ಅವರು, ಸಿ ಟಿ ರವಿ ದ್ವೇಷ ಭಾಷಣ ಮಾಡಿದ್ದಾರೆ. ಅದರ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಅದರ ಕುರಿತು ಅಗತ್ಯ ಕ್ರಮವನ್ನು ಪೊಲೀಸರು ಕೈಗೊಳ್ಳುತ್ತಾರೆ ಎಂದಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ

