ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶೋತ್ಸವ ಮೆರವಣಿಗೆ ಸಂದರ್ಭ ನಡೆದ ಕಲ್ಲು ತೂರಾಟ ಪ್ರಕರಣ ಇದೀಗ ರಾಜ್ಯವ್ಯಾಪಿ ಆಕ್ರೋಶಕ್ಕೆ ಕಾರಣವಾಗಿದೆ. ಮೆರವಣಿಗೆಯ ಮಾರ್ಗದ ಸಮೀಪದಲ್ಲಿದ್ದ ಮಸೀದಿಯಿಂದ ಕಲ್ಲು ತೂರಾಟ ನಡೆದಿದೆ ಎಂಬ ಆರೋಪ ಹೊರಬಿದ್ದ ಹಿನ್ನೆಲೆಯಲ್ಲಿ, ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ.
ಇದೀಗ, ಮದ್ದೂರಿನ ಚನ್ನೆಗೌಡ ಬಡಾವಣೆ ಬಳಿ ಇರುವ ಆ ಮಸೀದಿಯೇ ಅಕ್ರಮ ನಿರ್ಮಾಣ ಎಂಬ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಮಸೀದಿಯನ್ನು ಕಾನೂನುಬಾಹಿರವಾಗಿ ನಿರ್ಮಿಸಲಾಗಿದೆ ಎಂದು ಸ್ಥಳೀಯರು ಜಿಲ್ಲಾಧಿಕಾರಿಗಳಿಗೆ, ಹಾಗೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಗೂ ದೂರು ಸಲ್ಲಿಸಿದ್ದರು ಎನ್ನಲಾಗಿದೆ.
ಸ್ಥಳೀಯರ ಪ್ರಕಾರ, ಮಸೀದಿ ಅಕ್ರಮವಾಗಿ ನಿರ್ಮಾಣಗೊಂಡಿದ್ದು, ಮೆರವಣಿಗೆ ಹಾಗೂ ಧಾರ್ಮಿಕ ಉತ್ಸವಗಳನ್ನು ಮಸೀದಿಯ ಎದುರು ಹಾದು ಹೋಗಲು ನಿರ್ಬಂಧ ಹೇರಲಾಗಿದೆ, ಸತ್ತ ಹಿಂದೂಗಳ ಶವವನ್ನು ಸಾಗಿಸುವಾಗ ತಮಟೆ ಬಾರಿಸುವುದಕ್ಕೂ ತಡೆ ವಿಧಿಸಲಾಗಿದೆ.
ಅಷ್ಟೇ ಅಲ್ಲದೆ, ಮಸೀದಿಯಲ್ಲಿ ಮದರಸಾ ಚಟುವಟಿಕೆಗಳು, ಅಪರಿಚಿತ ವ್ಯಕ್ತಿಗಳ ಸಂಚಾರ, ಅಕ್ರಮ ಹಣಕಾಸು ವ್ಯವಹಾರಗಳು, ಹಾಗೆಯೇ ದೇಶದ್ರೋಹ ಚಟುವಟಿಕೆಗಳು ನಡೆಯುತ್ತಿವೆ ಎಂದು ದೂರಿನಲ್ಲಿ ಸ್ಥಳೀಯರು ಉಲ್ಲೇಖಿಸಿದ್ದಾರೆ. ಈ ಮಸೀದಿ 2025ರ ಜೂನ್ ತಿಂಗಳಲ್ಲಿ ಉದ್ಘಾಟನೆಗೊಂಡಿತ್ತು. ನಿರ್ಮಾಣ ಹಂತದಲ್ಲೇ ಅಕ್ರಮದ ಬಗ್ಗೆ ಆಡಳಿತಕ್ಕೆ ಎಚ್ಚರಿಕೆ ನೀಡಲಾಗಿತ್ತು. ಆದಾಗ್ಯೂ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಸೀದಿ ಪೂರ್ಣಗೊಂಡಿದ್ದು, ಈಗ ಅಲ್ಲಿಂದ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ