450 ಕೋಟಿ ವೆಚ್ಚದ ಸಮೀಕ್ಷೆ – ಜಾತಿ ಲೆಕ್ಕವೋ? ಲಾಭದ ಲೆಕ್ಕವೋ?

ಕರ್ನಾಟಕದಲ್ಲಿ 2025 ರಲ್ಲಿ ನಡೆಯಲಿರುವ ಸಾಮಾಜಿಕ ಆರ್ಥಿಕ ಸಮೀಕ್ಷೆ, ಅಂದರೆ ಜಾತಿಗಣತಿ ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಬೃಹತ್ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ರಾಜ್ಯ ಹಿಂದುಳಿದ ವರ್ಗ ಆಯೋಗದ ಮಾರ್ಗದರ್ಶನದಲ್ಲಿ ಈ ಸಮೀಕ್ಷೆ ನಡೆಯಲಿದೆ. ಇದಕ್ಕೆ 2.5 ಕೋಟಿಗೂ ಹೆಚ್ಚು ಕುಟುಂಬಗಳ ಮನೆಗೆ ಶಿಕ್ಷಕರು ಭೇಟಿ ನೀಡಿ, 60ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಲಿದ್ದಾರೆ.

ಸರ್ಕಾರದ ಪ್ರಕಾರ, ಈ ಸಮೀಕ್ಷೆಯ ಉದ್ದೇಶ ಸರ್ಕಾರದ ಸೌಲಭ್ಯಗಳು ನಿಜವಾಗಿಯೂ ಅರ್ಹ ಫಲಾನುಭವಿಗಳಿಗೆ ತಲುಪುತ್ತಿವೆಯೆ ಎಂಬುದನ್ನು ಪರಿಶೀಲಿಸುವುದು. ಆದರೆ, ಈ ಕಾರ್ಯದ ಹಿಂದೆ ರಾಜಕೀಯ ಲೆಕ್ಕಾಚಾರಗಳ ಅನುಮಾನಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ.

ಈ ಸಮೀಕ್ಷೆ ಮೂಲಕ ಕರ್ನಾಟಕದಲ್ಲಿರುವ ಕಾಂಗ್ರೆಸ್​ ಸರಕಾರ ಏನನ್ನು ಸಾಧಿಸಲು ಹೊರಟಿದೆ ಎಂಬುದನ್ನು ವಿಶ್ಲೇಷಿಸುವುದು ಅತ್ಯಗತ್ಯ. ಯಾಕಂದ್ರೆ ಈ ಕೆಲಸಕ್ಕೆ ಸಾರ್ವಜನಿಕರಿಂದ ಸಂಗ್ರಹಿಸಿದ ತೆರಿಗೆ ಹಣ 450 ಕೋಟಿ ರೂಪಾಯಿ ಖರ್ಚಾಗುತ್ತದೆ ಎಂಬುದನ್ನು ಕೇಳಿದರೆ ಮೈಜುಂ ಎನ್ನುತ್ತದೆ.

2015ರಲ್ಲಿ ಈ ರೀತಿಯ ಸಮೀಕ್ಷೆ ಕೈಗೊಂಡಿದ್ದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ವರದಿಯನ್ನು 2024-25 ರಲ್ಲಿ ಅಂಗೀಕರಿಸಿದರು. ಆದ್ರೂ ಕೂಡ ಪ್ರಬಲ ವಿರೋಧದ ಮಧ್ಯೆ ಅದನ್ನು ಕೈಬಿಟ್ಟಿತ್ತು. ಈ ಬಾರಿಯ ಸಮೀಕ್ಷೆ ವಿಭಿನ್ನ. ಅದರ ರಾಜಕೀಯ ಫಲಿತಾಂಶಗಳ ಬಗ್ಗೆ ಪ್ರಶ್ನೆ ಚುರುಕಾಗಿದೆ.

ಈ ಬಾರಿಯ ಸಮೀಕ್ಷೆಯಲ್ಲಿ ಶಿಕ್ಷಕರನ್ನು ಮನೆಮನೆಗೆ ಕಳಿಸಲಾಗುತ್ತಿದೆ. ಅದು ಕೂಡ ದಸರಾ ರಜೆಯಲ್ಲಿ. ಕೆಲಸಗಳಲ್ಲಿ ನಿರತರಾಗಿಸುವುದನ್ನು ಹಲವು ಶಿಕ್ಷಕರು ವಿರೋಧಿಸುತ್ತಿದ್ದಾರೆ. ಈ ನಡುವೆ ಸರ್ಕಾರ ಈ ಕಾರ್ಯವನ್ನು ಸಾಮಾಜಿಕ ಜವಾಬ್ದಾರಿ ಎಂಬ ನಿಟ್ಟಿನಲ್ಲಿ ನ್ಯಾಯೀಕರಿಸಿದೆ. ಸಮೀಕ್ಷೆ ಮಾಡಿದ ಶಿಕ್ಷಕರಿಗೆ ವಿಶೇಷ ಸಂಭಾವನೆ ನೀಡುವುದಾಗಿ ಸರ್ಕಾರ ಹೇಳಿದೆ.

ರಾಜ್ಯದಲ್ಲಿ ಒಕ್ಕಲಿಗರು, ಲಿಂಗಾಯತರು ಸೇರಿದಂತೆ ಕೆಲವು ಪ್ರಮುಖ ಸಮುದಾಯಗಳಿಗೆ ಚುನಾವಣೆಯಲ್ಲಿ ಹೆಚ್ಚು ಬಿ-ಫಾರ್ಮ್ ನೀಡುವ ನೆಪವನ್ನೂ ಈ ಸಮೀಕ್ಷೆ ಒದಗಿಸಬಹುದು ಎಂಬ ಅನುಮಾನಗಳು ರಾಜಕೀಯ ವಲಯದಲ್ಲಿ ಆಳವಾಗಿ ನೆಲೆಸಿವೆ. ಈ ಸಮೀಕ್ಷೆಯು ರಾಜಕೀಯ ದುರಾಶೆಗಳ ಸಾಧನವಾಗದೆಯೇ ನಡೆಯುತ್ತದೆಯೇ ಎಂಬುದನ್ನು ಸಮಯವೇ ಉತ್ತರಿಸಬೇಕು.

ವರದಿ : ಲಾವಣ್ಯ ಅನಿಗೋಳ

About The Author