ಅಕ್ಟೋಬರ್ 9ರಿಂದ 23ರವರೆಗೆ ಹಾಸನಾಂಬೆ ಉತ್ಸವ ನಡೆಯಲಿದೆ. ಈ ಬಾರಿ ವಿವಾದ ರಹಿತ ಮತ್ತು ವ್ಯವಸ್ಥಿತವಾಗಿ ಉತ್ಸವ ಮಾಡಬೇಕೆಂದು, ಅಧಿಕಾರಿಗಳಿಗೆ ಉಸ್ತುವಾರಿ ಸಚಿವ ಕೃಷ್ಣ ಭೈರೇಗೌಡ ಕಟ್ಟಪ್ಪಣೆ ವಿಧಿಸಿದ್ದಾರೆ. ಈಗಾಗಲೇ ಡಿಸಿ, ಸಿಇಒ, ಎಸ್‌ಪಿ ಸೇರಿದಂತೆ ಅಧಿಕಾರಿಗಳ ಜೊತೆ, ಹಲವು ಸುತ್ತಿನ ಸಭೆಗಳನ್ನು ಮಾಡಿದ್ದಾರೆ. ಇಷ್ಟಾದ್ರೂ ಟೆಂಡರ್ ವಿಚಾರವಾಗಿ ವಿವಾದ ಭುಗಿಲೆದ್ದಿದೆ.
ಭಕ್ತರು ಸರತಿ ಸಾಲಿನಲ್ಲಿ ನಿಲ್ಲುವ 28 ಕಿಲೋ ಮೀಟರ್ ಜಾಗದಲ್ಲಿ, ಜರ್ಮನ್‌ಟೆಂಟ್ ಹಾಗೂ ಬ್ಯಾರಿಕೇಡ್ ಹಾಕುವ ಕೆಲಸಕ್ಕೆ ಗುತ್ತಿಗೆ ನೀಡಲಾಗಿದೆ. 12 ಲಕ್ಷ ರೂ.ಗಳಿಗೆ ನೀಡಬಹುದಾದ ಟೆಂಡರ್‌ಗೆ, 65 ಲಕ್ಷ ರೂ. ನೀಡಲಾಗಿದೆಯಂತೆ. ಹೀಗಂತ ವಕೀಲ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡ ಆರೋಪ ಮಾಡಿದ್ದಾರೆ.
ಇನ್ನು, ಸಿಸಿ ಕ್ಯಾಮೆರಾ ಅಳವಡಿಕೆಗೆ 20 ಲಕ್ಷ ರೂ.ಗಳ ಟೆಂಡರ್ ಅನ್ನು 60 ಲಕ್ಷ ರೂ.ಗೆ ನೀಡಲಾಗಿದೆ. ಅಷ್ಟು ಹಣ ನೀಡಿದರೆ ಶಾಶ್ವತವಾಗೇ ಸಿಸಿ ಕ್ಯಾಮೆರಾ ಅಳವಡಿಸಬಹುದು. ಈ ರೀತಿ ಮನಸೋ ಇಚ್ಛೆ ಗುತ್ತಿಗೆ ನೀಡುವುದು ಸರಿಯಲ್ಲ. ಇದರ ವಿರುದ್ಧ ಹೋರಾಟ ಮಾಡುತ್ತೇನೆಂದು ಎಚ್ಚರಿಕೆ ನೀಡಿದ್ದಾರೆ.
ಗುತ್ತಿಗೆ ಕೆಲಸಗಳನ್ನು ಹೆಚ್ಚಿನ ಮೊತ್ತಕ್ಕೆ ನೀಡಲಾಗಿದೆ. ಈಗಾಗಲೇ 48 ಸಾವಿರ ಗೋಲ್ಡ್‌ಪಾಸ್ ನೀಡಿದ್ದಾರೆಂಬ ಮಾಹಿತಿ ಇದೆ. ಆದ್ರೆ, ಅಧಿಕೃತವಾಗಿ ಎಷ್ಟು ಪಾಸ್ ಕೊಡಲಾಗಿದೆ ಎಂಬುದನ್ನು ಸಾರ್ವಜನಿಕರಿಗೂ ತಿಳಿಸಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಿರುವುದಾಗಿ, ಬಿಜೆಪಿ ಮುಖಂಡ ದೇವರಾಜೇಗೌಡ ಹೇಳಿದ್ದಾರೆ.