ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಹಾಗೂ ಹುನ್ನಾರ ನಡೆದಿದೆ. ಇದರ ಹಿಂದೆ ತಮಿಳುನಾಡಿನ ಕಾಂಗ್ರೆಸ್ ಸಂಸದ ಮತ್ತು ದಕ್ಷಿಣ ಕನ್ನಡದ ಮಾಜಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರ ಪಾತ್ರವಿದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಗಂಭೀರ ಆರೋಪ ಮಾಡಿದ್ದಾರೆ.
ಮುಸುಕುಧಾರಿ ವ್ಯಕ್ತಿ ಕೂಡ ತಮಿಳುನಾಡಿನವನೇ. ಅವನು ವರ್ಷಗಳಿಂದ ಅಲ್ಲಿ ವಾಸಿಸುತ್ತಿದ್ದ. ಸಸಿಕಾಂತ್ ಸೆಂಥಿಲ್‌ಗೆ ಅವನ ಜೊತೆ ನಂಟಿದೆ. ಧರ್ಮಸ್ಥಳದ ಕೇಸ್ ಕುರಿತು ರಾಜ್ಯ ಸರ್ಕಾರದ ತನಿಖಾ ಸಂಸ್ಥೆಗಳಿಂದ ಸತ್ಯ ಹೊರಬರುವುದಿಲ್ಲ. ಏಕೆಂದರೆ ಇದು ರಾಜಕೀಯ ಪ್ರೇರಿತ ಪ್ರಕರಣವಾಗಿದೆ. ಈ ಪ್ರಕರಣವನ್ನು CBI ಮತ್ತು NIA ಅವಶ್ಯವಾಗಿ ತನಿಖೆ ಮಾಡಬೇಕು ಎಂದು ಹೇಳಿದ್ದಾರೆ.
ಧರ್ಮಸ್ಥಳದ ಕುರಿತು ದುಷ್ಟ ಎಡಪಂಥೀಯ ಶಕ್ತಿಗಳಿಂದ ಅಪಪ್ರಚಾರ ನಡೆಯುತ್ತಿದೆ. ಇವುಗಳ ಹಿಂದೆ ಎಡಪಂಥೀಯ ಮನೋಭಾವನೆ ಹೊಂದಿರುವ ಕೆಲವು ಸಂಘಟನೆಗಳ ಬಲವಿದೆ. ಈ ಹುನ್ನಾರವನ್ನು ಇಲ್ಲಿಯೇ ಕೊನೆಗಾಣಿಸಬೇಕು. ಮೂರು ಸ್ಥಳಗಳಲ್ಲಿ ಹೆಣ ಹೂತಿಟ್ಟಿದ್ದಾರೋ ಎಂಬ ಮಾಹಿತಿ ಬೋಗಸ್ ಆಗಿರುವುದು ಬಹಿರಂಗವಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಉದ್ದೇಶ ಸ್ವಚ್ಛವಲ್ಲ. ಸಿಎಂ ಸಿದ್ದರಾಮಯ್ಯ ಅಧಿಕಾರಕ್ಕೆ ಅಂಟಿಕೊಂಡಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ ಈ ಹುನ್ನಾರವನ್ನು ಬಿಚ್ಚಿಟ್ಟಿದ್ದಾರೆ. ಆದರೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿಲ್ಲ. ನಾನು ಈ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದೇನೆ. ಯತ್ನದ ಹಿಂದೆ ಇರುವವರು ಬಹಿರಂಗವಾಗಬೇಕು ಎಂದು ಜನಾರ್ದನ ರೆಡ್ಡಿ ಅವರು ಒತ್ತಾಯಿಸಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ