ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ರನ್ನು, ಮತ್ತೆ ಬಿಜೆಪಿಗೆ ಸೇರಿಸಿಕೊಳ್ಳಬೇಕೆಂಬ ಕೂಗು ಜೋರಾಗಿದೆ. ಯತ್ನಾಳ್‌ಗೆ ಬಿಜೆಪಿ ಹೈಕಮಾಂಡ್ ಆಹ್ವಾನ ನೀಡಬೇಕೆಂದು, ಮಾಜಿ ಸಂಸದ ರಮೇಶ್ ಕತ್ತಿ ಆಗ್ರಹಿಸಿದ್ದಾರೆ. ಇಲ್ಲವಾದ್ರೆ ಉತ್ತರ ಕರ್ನಾಟಕದ ಧ್ವನಿ ಬಡವಾಗುತ್ತದೆ ಅಂತಾ ಆತಂಕ ಹೊರಹಾಕಿದ್ದಾರೆ.
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ದಿವಂಗತ ಉಮೇಶ್ ಕತ್ತಿ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಮೇಶ್ ಕತ್ತಿ, ಯಾವುದೇ ಷರತ್ತು ಇಲ್ಲದೆ ಬಸನಗೌಡ ಪಾಟೀಲ್ ಯತ್ನಾಳ್‌ರನ್ನು, ಪಕ್ಷಕ್ಕೆ ಸೇರಿಸಿಕೊಳ್ಳಲು ವರಿಷ್ಠರು ಮುಂದಾಗಬೇಕೆಂದು ಹೇಳಿದ್ದಾರೆ.
ಉಮೇಶ್ ಕತ್ತಿ ಪದೇ ಪದೇ ನನಗೆ ಒಂದು ಮಾತು ಹೇಳುತ್ತಿದ್ದರು. ನನಗೆ ಯಾವ ಸಂದರ್ಭದಲ್ಲಿ ಏನು ಆಗುತ್ತದೆಯೋ ಗೊತ್ತಿಲ್ಲ. ಎಂ.ಬಿ. ಪಾಟೀಲ್ ಮತ್ತು ನಾನು, ವೈಮನಸ್ಸು ಬಿಟ್ಟು ಹೊಂದಾಣಿಕೆ ಮಾಡಿಕೊಳ್ಳಬೇಕೆಂದು ನಿರ್ಧಾರ ಮಾಡಿದ್ದೇವೆ. ಇದರ ಜವಾಬ್ದಾರಿಯನ್ನು ಬಸನಗೌಡ ಪಾಟೀಲ್ ಯತ್ನಾಳ್ ವಹಿಸಿಕೊಂಡಿದ್ದಾರೆ.
ಅಷ್ಟರಲ್ಲಿ ನನಗೆ ಏನಾದರೂ ಆದರೆ ನೀನು ಧೃತಿಗೆಡಬೇಡಿ. ಪ್ರಕಾಶ್ ಹುಕ್ಕೇರಿ, ಪ್ರಭಾಕರ ಕೋರೆ, ಎಂ.ಬಿ.ಪಾಟೀಲ್ ಮಾರ್ಗದರ್ಶನಲ್ಲಿ ಮುಂದೆ ನಡೆಯಬೇಕೆಂದು 2 ಬಾರಿ ಹೇಳಿದ್ದರು. ಅವರ ನಿಧನದ ನಂತರ ನನಗೇನೂ ತೋಚಲಿಲ್ಲವೆಂದು ಭಾವುಕರಾಗಿ ರಮೇಶ್ ಕತ್ತಿ ಕಣ್ಣೀರಿಟ್ಟಿದ್ದಾರೆ.
ಮುಂದಿನ ದಿನಗಳಲ್ಲಿ ನಾವು ಉತ್ತರ ಕರ್ನಾಟಕದಲ್ಲಿ ಪ್ರವಾಸ ಕೈಗೊಳ್ಳುತ್ತೇವೆ. ಹುಕ್ಕೇರಿ ಕ್ಷೇತ್ರಕ್ಕೆ ಕೈಹಾಕಿದವರನ್ನು ಮನೆಯಲ್ಲಿ ಕೂರಿಸಲಾಗುವುದು ಅಂತಾ, ಪರೋಕ್ಷವಾಗಿ ಸತೀಶ್ ಜಾರಕಿಹೊಳಿ ಹಾಗೂ ಅಣ್ಣಾಸಾಹೇಬ ಜೊಲ್ಲೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.