ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಭರ್ಜರಿ ಐಟಿ ದಾಳಿ ನಡೆದಿದೆ. ಈ ಬಾರಿ ಜನಪ್ರಿಯ ಬಟ್ಟೆ ಶೋ ರೂಂ ಪೋಥಿಸ್ ಮಳಿಗೆ ಗುರಿಯಾಗಿದೆ. ಮೈಸೂರು ರಸ್ತೆಯ ಟೆಂಬರ್ ಲೇಔಟ್ ಹಾಗೂ ಗಾಂಧಿನಗರದಲ್ಲಿರುವ ಅತಿದೊಡ್ಡ ಶೋ ರೂಂಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಒಟ್ಟು 50ಕ್ಕೂ ಹೆಚ್ಚು ಅಧಿಕಾರಿಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಪ್ರತ್ಯೇಕ ತಂಡಗಳನ್ನು ರಚಿಸಿ ದಾಳಿ ಕೈಗೊಳ್ಳಲಾಗಿದೆ. ಆದಾಯ ತೆರಿಗೆ ವಂಚನೆ ಪ್ರಕರಣದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿರುವುದಾಗಿ ತಿಳಿದು ಬಂದಿದೆ.
ಗಾಂಧಿನಗರದಲ್ಲಿರುವ ಪೋಥಿಸ್ ಮಳಿಗೆಯಲ್ಲಿ 30 ಅಧಿಕಾರಿಗಳ ತಂಡ ಮತ್ತು ಟೆಂಬರ್ ಲೇಔಟ್‌ನ ಮಳಿಗೆಯಲ್ಲಿ 25ಕ್ಕೂ ಹೆಚ್ಚು ಅಧಿಕಾರಿಗಳ ತಂಡ ದಾಖಲೆ ಪರಿಶೀಲನೆ ನಡೆಸಿದೆ. ಮಳಿಗೆಯ ನಗದು ವಹಿವಾಟು, ಆನ್‌ಲೈನ್ ವ್ಯವಹಾರ, ಬಟ್ಟೆಗಳ ಮೌಲ್ಯ ಸೇರಿ ಎಲ್ಲಾ ಪ್ರಮುಖ ದಾಖಲೆಗಳನ್ನು ಅವರು ತಪಾಸಣೆ ಮಾಡಿದ್ದಾರೆ.
ಪೋಥಿಸ್ ಮಳಿಗೆ ತಮಿಳುನಾಡಿನ ಉದ್ಯಮಿಗೆ ಸೇರಿದ್ದು, ಚೆನ್ನೈ ಮತ್ತು ಮಧುರೈ ಸೇರಿದಂತೆ ಅಲ್ಲಿ ಅತಿದೊಡ್ಡ ಉದ್ಯಮವಾಗಿ ಬೆಳೆದಿದೆ. ನಂತರ ಇತರ ರಾಜ್ಯಗಳಿಗೂ ವಿಸ್ತರಿಸಿಕೊಂಡು ಬೆಂಗಳೂರಿನಲ್ಲಿ ಎರಡು ಅತಿದೊಡ್ಡ ಮಳಿಗೆಗಳನ್ನು ಸ್ಥಾಪಿಸಿದೆ.
ಭಾರಿ ಪ್ರಮಾಣದಲ್ಲಿ ಆದಾಯ ತೆರಿಗೆ ವಂಚನೆ ನಡೆದಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ತಮಿಳುನಾಡಿನ ತನಿಖೆಯ ಅಂಗವಾಗಿ ಚೆನ್ನೈನಿಂದ ಐಟಿ ಅಧಿಕಾರಿಗಳ ತಂಡ ಬೆಂಗಳೂರಿಗೆ ಬಂದು ದಾಳಿ ನಡೆಸಿದೆ. ಕೆಲವೇ ವರ್ಷಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ಪೋಥಿಸ್ ಮೇಲೆ ಈಗ ಐಟಿ ಇಲಾಖೆ ಕಣ್ಣಿಟ್ಟಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ