ಮೈಸೂರು : ಮೈಸೂರು ಅಭಿವೃದ್ಧಿ ಮಾಡಿದ್ದು ನಾವೇ ಹೊರತು ಬಿಜೆಪಿಯವರು ಅಲ್ಲ. ಬಿಜೆಪಿ ಅಧಿಕಾರದಲ್ಲಿ ದುಡ್ಡು ಹೊಡೆಯಲು ದುಡ್ಡಿಲ್ಲದೆ ಕೆಲಸ ಮಾಡಿಸಿದರು. ಆದರೆ ಬಿಲ್ ಕೊಟ್ಟಿದ್ದು ನಾವು. ಬಿಜೆಪಿಯವರು ಈಗ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ನಗರದಲ್ಲಿಂದು ಯುವ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ಮಾಡಿಸಿದ್ದು, ನೋಡೋ ಮಹದೇವಪ್ಪ. ಈಗ ಯಾರೋ ಬಂದು ಅದರ ಕ್ರೆಡಿಟ್ ಪಡೆಯಲು ಓಡಾಡುತ್ತಾರೆ. ಆತನ ಹೆಸರು ಕೂಡ ಹೇಳೋಕೆ ನಾನು ಹೋಗುವುದಿಲ್ಲ ಎಂದು ಪರೋಕ್ಷವಾಗಿ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಯವರು ಮೈಸೂರಿಗೆ ಏನಾದ್ರೂ ಮಾಡಿದ್ರಾ ? ಇಲ್ಲಿರುವ ಮಹಾರಾಣಿ ಕಾಲೇಜು, ಆಸ್ಪತ್ರೆ, ಜಯದೇವ ಆಸ್ಪತ್ರೆ ಸೇರಿ ಇಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳೆಲ್ಲಾ ನಮ್ಮಿಂದ ಆಗಿದ್ದು. ನಾನು ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಸರ್ಕಾರ ಮೈಸೂರಿನ ಅಭಿವೃದ್ಧಿ ಮಾಡಿದ್ದೇ ಹೊರತು ಬುರುಡೆ ಬಿಜೆಪಿ ಮಾಡಿದ್ದೇನೂ ಇಲ್ಲ ಎಂದು ಟೀಕಿಸಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ನಮ್ಮ ಜೊತೆ ಒಂದೇ ವೇದಿಕೆಯಲ್ಲಿ ಬಹಿರಂಗ ಚರ್ಚೆಗೆ ಬರಲಿ. ನಾನೇ ಬರುತ್ತೇನೆ. ಈ ಸವಾಲನ್ನು ಬಿಜೆಪಿ ಸ್ವೀಕರಿಸಲು ಸಿದ್ದವಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ ಏನೂ ಕೆಲಸ ಮಾಡದೆ ಕೇವಲ ಬರೀ ಬುರುಡೆ ಬಿಡತ್ತೆ. ಬಿಜೆಪಿಯವರು ಕೆಲಸ ಮಾಡಿದ ಸಾಕ್ಷಿ ಗುಡ್ಡೆ ತೋರಿಸಿ ಎಂದು ಹರಿಹಾಯ್ದಿದ್ದಾರೆ.
ಸಂಘ ಪರಿವಾರ ನಮ್ಮ ಸಂವಿಧಾನದಿಂದ ಜಾತ್ಯತೀತ ಮತ್ತು ಸಮಾಜವಾದವನ್ನು ತೆಗೆದು ಹಾಕಲು ಷಡ್ಯಂತ್ರ ನಡೆಸುತ್ತಿದೆ. ಬಿಜೆಪಿ ತನ್ನ ಹುಟ್ಟಿನಿಂದಲೇ ಸಾಮಾಜಿಕ ನ್ಯಾಯದ ವಿರೋಧಿ ಆಗಿರುವುದರಿಂದ ಹೀಗೆ ಮಾಡುತ್ತಿದೆ. ಈ ಷಡ್ಯಂತ್ರವನ್ನು ರಾಜ್ಯದ ಮತ್ತು ದೇಶದ ಯುವ ಜನತೆ ಸೋಲಿಸಲು ಕಟ್ಟಿಬದ್ದವಾಗಿ ನಿಂತು ಹೋರಾಡಿ ಮುನ್ನಡೆಸುತ್ತದೆ ಎನ್ನುವ ಭರವಸೆ ನನಗಿದೆ ಎಂದಿದ್ದಾರೆ.
ಆರ್‌ಎಸ್‌ಎಸ್‌ನವರು ಯಾವತ್ತೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ. ಬಿಜೆಪಿಗೆ ದೇಶಭಕ್ತಿಯ ಬಗ್ಗೆ ಮಾತಾಡಲು ಯಾವ ನೈತಿಕ ಹಕ್ಕಿದೆ? ಬಿಜೆಪಿ, ಆರ್‌ಎಸ್‌ಎಸ್‌ನವರು ಮಾತ್ರ ದೇಶಭಕ್ತರಾ? ಮೋದಿ ಆದಿಯಾಗಿ ಎಲ್ಲರೂ ಬರೀ ಭಾಷಣದಲ್ಲಿ ಮಾತ್ರ ಸಬ್ ಕಾ ಸಾಥ್ ಅಂತಾರೆ. ಆದರೆ ಅವರ ನಡೆ ಅದಕ್ಕೆ ವಿರೋಧ. ಒಬ್ಬ ಮುಸ್ಲಿಂ ಬಿಜೆಪಿ ಸಂಸದನನ್ನು ತೋರಿಸಿ. ಒಬ್ಬನೇ ಒಬ್ಬ ಮುಸ್ಲಿಮರನ್ನು ಬಿಜೆಪಿ ಅವರು ಸಂಸದರಾಗಿ ಮಾಡಿಲ್ಲ. ಅಂಬೇಡ್ಕರ್ ಅವರನ್ನು ಸಾರ್ವಕರ್ ಮತ್ತು ಕಮ್ಯೂನಿಸ್ಟರು ಚುನಾವಣೆಯಲ್ಲಿ ಸೋಲಿಸಿದ್ದರು. ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಚುನಾವಣೆಯಲ್ಲಿ ಸೋಲಿಸಿಲ್ಲ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.