ಇಂದಿಗೆ ಸರಿಯಾಗಿ ನಾಲ್ಕು ವರ್ಷಗಳು. ನಮ್ಮ ಎಲ್ಲರ ನೆಚ್ಚಿನ ಕರ್ನಾಟಕ ರತ್ನ, ಪ್ರೀತಿಯ ಅಪ್ಪು – ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮೊಳಗಿಲ್ಲದ ದಿನ. ಆದರೆ ಅವರ ನೆನಪು, ಅವರ ನಗು, ಅವರ ಅಭಿಮಾನಿಗಳ ಮನಸ್ಸಿನಲ್ಲಿ ಸದಾ ಜೀವಂತವಾಗಿದೆ. ಇಂದು ಅವರ ನಾಲ್ಕನೇ ವರ್ಷದ ಪುಣ್ಯಸ್ಮರಣೆ, ಮತ್ತು ಇಡೀ ಕರುನಾಡು ದೊಡ್ಮನೆಯ ರಾಜಕುಮಾರನ ನೆನಪಿನಲ್ಲಿ ಭಾವುಕರಾಗಿದ್ದು, ಅದೇ ನೆನಪನ್ನು ಸಂಭ್ರಮದ ರೂಪದಲ್ಲೂ ಆಚರಿಸುತ್ತಿದೆ.
ಅಪ್ಪು ಅವರ ಪುಣ್ಯಸ್ಮರಣೆಯ ಅಂಗವಾಗಿ ಅಭಿಮಾನಿಗಳ ದಂಡುಗಳು ಕಂಠೀರವ ಸ್ಟುಡಿಯೋಗೆ ಆಗಮಿಸುತ್ತಿದ್ದು, ದೊಡ್ಮನೆಯ ಕುಟುಂಬದವರು ಅಶ್ವಿನಿ ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ದಂಪತಿ, ಹಾಗೂ ಅಕ್ಕಂದಿರು-ಭಾವಂದಿರು ಸೇರಿ ಅಪ್ಪು ಅವರ ಸಮಾಧಿಗೆ ಪೂಜೆ ಸಲ್ಲಿಸುತ್ತಿದ್ದಾರೆ.
ಪ್ರತಿ ವರ್ಷದಂತೆಯೇ ಈ ಬಾರಿ ಕೂಡ ಅನ್ನದಾನ, ರಕ್ತದಾನ ಮತ್ತು ನೇತ್ರದಾನ ಶಿಬಿರಗಳು ಆಯೋಜನೆಯಾಗಿದ್ದು, ವಿವಿಧ ಸ್ಥಳಗಳಲ್ಲಿ ಅಪ್ಪು ಅವರ ಪ್ರತಿಮೆಗಳಿಗೆ ಪೂಜೆ ನೆರವೇರಿಸಿ, ಪ್ರಸಾದ ಹಂಚುವ ಕಾರ್ಯ ನಡೆಯಲಿದೆ. ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ ಈಗ ನಾಲ್ಕು ವರ್ಷಗಳು ಕಳೆದರೂ, ಅವರ ನೆನಪು ಕನ್ನಡಿಗರ ಹೃದಯದಲ್ಲಿ ಎಂದೆಂದಿಗೂ ಅಳಿಯದಂತೆ ಉಳಿದಿದೆ.
ಅಪ್ಪು ಸ್ಮರಣಾರ್ಥವಾಗಿ ಪಿಆರ್‌ಕೆ ಆಪ್ ಅಧಿಕೃತವಾಗಿ ಬಿಡುಗಡೆಗೊಂಡಿದೆ. ಅದೇ ವೇಳೆ ಪಿಆರ್‌ಕೆ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಸಂದರ್ಶನದ ಪ್ರೊಮೋ ಬಿಡುಗಡೆಗೊಂಡಿದ್ದು, ನಿರೂಪಕಿ ಅನುಶ್ರೀ ಅವರೊಂದಿಗೆ ಮಾತನಾಡಿದ ವೇಳೆ ಅಶ್ವಿನಿ ಅವರು ಅಪ್ಪು ಅವರ ಜೀವನದ ಅನೇಕ ಸ್ಮರಣೀಯ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ನನಗೆ ಬಂದ ಮೊದಲ ಸಂಬಳದಲ್ಲಿ ಅಮ್ಮನಿಗೆ ಸೀರೆ ಕೊಡಿಸಿದ್ದೆ, ಅಪ್ಪುಗೆ ಜೋಡಿ ಗ್ಲಾಸ್ ಕೊಡಿಸಿದ್ದೆ, ಅಲ್ಲಿಂದಲೇ ನಮ್ಮ ಪಯಣ ಆರಂಭವಾಯಿತು ಎಂದು ಅಶ್ವಿನಿ ಅವರು ಮನದಾಳದ ನೆನಪು ಹಂಚಿಕೊಂಡಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

