Banglore News:
ಬಾನೆತ್ತರದಲ್ಲಿ ಬಣ್ಣ ಬಣ್ಣದ ತೋರಣ ನೆಲದಂಚಲ್ಲಿ ಹಳ್ಳಿ ಸೊಗಡಿನ ಅಲಂಕಾರದ ಹೂರಣ..ಒಂದೆಡೆ ಎತ್ತುಗಳ ಹೆಜ್ಜೆ ಮತ್ತೊಂದೆಡೆ ಸದ್ದು ಮಾಡುತ್ತಿರೋ ಗೆಜ್ಜೆ..ಕರಕುಶಲತೆಯ ಕಲಾ ಕುಸುರಿ ಒಂದೆಡೆ ಕಂಡು ಬಂದರೆ ಮತ್ತೊಂದೆಡೆ ಆರೋಗ್ಯವೇ ಭಾಗ್ಯ ಎಂಬಂತೆ ಬಣ್ಣಿಸುತ್ತಿತ್ತು ಜೀನಿಯಂತಹ ಹೆಲ್ತ್ ಡ್ರಿಂಕ್ಸ್ ಗಳ ಝೇಂಕಾರ..ಒಟ್ಟಾರೆ ಸಿಲಿಕಾನ್ ಸಿಟಿಯಲ್ಲಿ ಸಂಕ್ರಾಂತಿಯ ಸೊಗಡಿಗೆ ಸುಗ್ಗಿ ಹುಗ್ಗಿ ಎಂಬ ನಾಮಾಂಕಿತದಲ್ಲಿ ಮಿಂಚುತ್ತಿತ್ತು ಜಕ್ಕೂರು. ಹೌದು ಎಂ.ಎಲ್.ಎ ಕೃಷ್ಣ ಬೈರೇ ಗೌಡರ ನೇತೃತ್ವದಲ್ಲಿ ಜಕ್ಕೂರಿನಲ್ಲಿ ಸುಗ್ಗಿ ಸಂಭ್ರಮ ಬಹಳ ವಿಜ್ರಂಭಣೆಯಿಂದ ನಡೆಯಿತು.
ಸುಗ್ಗಿ ಹುಗ್ಗಿ ಎಂಬ ಹೆಸರಿನಲ್ಲಿ ಜಕ್ಕೂರಿನಲ್ಲಿ ಸಾರ್ವಜನಿಕರಿಗಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಬ್ಯಾಟರಾಯನಪುರದ ಜಕ್ಕೂರು ಸುಗ್ಗಿ ಹಬ್ಬಕ್ಕೆ ಮದುವನಗಿತ್ತಿಯಂತೆ ಶೃಂಗಾರಗೊಂಡಿತ್ತು. ಒಂದು ರೀತಿಯಂತೆ ಹಳ್ಳಿಯ ಸಂಪೂರ್ಣ ಚಿತ್ರಣವೇ ಇಲ್ಲಿ ಭಿತ್ತರವಾಗಿತ್ತು. ಕಬ್ಬಿನ ಜಲ್ಲೆಯಂತೆ ಅಲಂಕೃತಗೊಂಡ ಕಳಶವನ್ನು ಆವರಿಸಿದ ಅಲಂಕಾರ ಮಧ್ಯದಲ್ಲಿ ಸಿರಿಧಾನ್ಯಗಳ ರಾಶಿ ಸುತ್ತಲೂ ಇರಿಸಿದ್ದ ಬಣ್ಣ ಬಳಿದ ಮಡಕೆಗಳು ಇದೇ ಸಮಯದಲ್ಲಿ ತಿರುಗಾಡಿದ ಎತ್ತಿನಗಾಡಿ ಇವೆಲ್ಲವೂ ನಗರದ ಮಧ್ಯೆಯೊಂದು ಮಿನಿ ಹಳ್ಳಿಯೇ ಸೃಷ್ಟಿಯಾದಂತಿತ್ತು.
ಇನ್ನು ಇದೇ ಸುಂದರ ಕ್ಷಣದಲ್ಲಿ ಜಾನಪದ ನೃತ್ಯ,ಹಾಡುಗಳು ನೆರೆದವರನ್ನು ಮುದಗೊಳಿಸಿದರೆ ಒಂದಷ್ಟು ಜಾನಪದ ಆಟಗಳು ಜನರನ್ನು ಚುರುಕುಗೊಳಿಸಿತು. ಜೊತೆಗೆ ಸಣ್ಣ ಸಂತೆಯಂತೆ ಕಂಡು ಬಂತು ಜೀನಿ ಮೊಳಕೆ ಕಟ್ಟಿದ ಕಾಳಿನ ಹೆಲ್ತ್ ಮಿಕ್ಸ್ ,ಜೀವನ್ ಆರ್ಗಾನಿಕ್,ಆದಿತ್ಯ ಹರ್ಬಲ್ ಔಷಧ ಉತ್ಪನ್ನಗಳು ಹಾಗು ಮಣ್ಣಿನ ಮಡಕೆಯ ಮಾರಾಟದ ಮಳಿಗೆಗಳು.
ಒಟ್ಟಾರೆ ಅಭಿವೃದ್ಧಿಯ ಹೆಸರಲ್ಲಿ ಪರಂಪರೆಯನ್ನೇ ಮರೆತಿರೋ ನ್ಯೂ ಜನರೇಶನ್ ಗ್ಯಾಪನ್ನು ಸುಗ್ಗಿ ಹುಗ್ಗಿ ಹೆಸರಲ್ಲಿ ತೆರೆದ ಹಳ್ಳಿ ತುಂಬಿಸಿದಂತಿತ್ತು…