ಕನ್ನಡ ಚಿತ್ರರಂಗದ ಖ್ಯಾತ ನಟಿಯರಾದ ಪ್ರಣಿತಾ ಸುಭಾಷ್ ಮತ್ತು ಹರ್ಷಿಕಾ ಪೂಣಚ್ಚ, ಈ ಬಾರಿ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ತಮ್ಮ ಕುಟುಂಬದೊಂದಿಗೆ ಭಕ್ತಿಭಾವದಿಂದ ಆಚರಿಸಿದ್ದಾರೆ. ತಮ್ಮ ಮಕ್ಕಳಿಗೆ ಶ್ರೀಕೃಷ್ಣನ ವೇಷ ತೊಡಿಸಿ, ಈ ಹಬ್ಬಕ್ಕೆ ವಿಭಿನ್ನ ಮೆರಗು ನೀಡಿದ್ದಾರೆ.
ಕೃಷ್ಣ ಜನ್ಮಾಷ್ಟಮಿ, ಭಗವಾನ್ ಶ್ರೀಕೃಷ್ಣನ ಜನ್ಮದಿನ. ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಒಂದಾಗಿ ದೇಶದಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಮಕ್ಕಳು ಕೃಷ್ಣನ ವೇಷ ಧರಿಸುವುದು ಈ ಹಬ್ಬದ ಆಕರ್ಷಣೆಯ ಭಾಗವಾಗಿದ್ದು, ಇದೇ ಪರಂಪರೆಯನ್ನು ಈಗ ಕನ್ನಡ ಚಿತ್ರರಂಗದ ನಟಿಯರೂ ಪಾಲಿಸಿಕೊಂಡಿದ್ದಾರೆ.
‘ಪೊರ್ಕಿ’ ಸಿನಿಮಾದ ಮೂಲಕ ಖ್ಯಾತಿಯಾದ ನಟಿ ಪ್ರಣಿತಾ, ತಮ್ಮ ಮಗ ಜೆಯ್ ಕೃಷ್ಣನಿಗೆ ಕೃಷ್ಣನ ಸಾಂಪ್ರದಾಯಿಕ ಉಡುಪು, ಕಿರೀಟ ಮತ್ತು ಕೊಳಲನ್ನು ತೊಡಿಸಿ ಹಬ್ಬವನ್ನು ಸಂಭ್ರಮಿಸಿದರು. ತಮ್ಮ ಮಗನ ಈ ಆಕರ್ಷಕ ರೂಪದ ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಹೀಗೇ, ನಟಿ ಹರ್ಷಿಕಾ ಪೂಣಚ್ಚ ಕೂಡ ತಮ್ಮ ಮಗಳು ತ್ರಿದೇವಿ ಪೊನ್ನಕ್ಕಗೆ ಕೃಷ್ಣನ ವೇಷ ತೊಡಿಸಿ, ತಾವು ಯಶೋದೆಯ ವೇಷ ಧರಿಸಿ ವಿಶೇಷ ರೀತಿಯಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಿದ್ದಾರೆ. ತಾಯಿ-ಮಗುವಿನ ಈ ಮುದ್ದಾದ ಸಂಭ್ರಮದ ಕ್ಷಣಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ.
ಈ ಭಕ್ತಿಭಾವಪೂರ್ಣ ಹಾಗೂ ಸಂಸ್ಕೃತಿಪರ ಆಚರಣೆಗಳು ಅಭಿಮಾನಿಗಳ ಗಮನ ಸೆಳೆಯುತ್ತಿದ್ದು, ನಟಿಯರ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
ವರದಿ : ಲಾವಣ್ಯ ಅನಿಗೋಳ