ಬೆಳಗಾವಿ ಎಂದರೆ ಪಕ್ಷದ ರಾಜಕೀಯಕ್ಕಿಂತಲೂ ಕುಟುಂಬ ರಾಜಕೀಯಕ್ಕೆ ಪ್ರಸಿದ್ಧ. ಇಲ್ಲಿ ಕುಟುಂಬಗಳ ನಡುವಿನ ಪೈಪೋಟಿಯೇ ರಾಜಕೀಯದ ನಿಜಸ್ವರೂಪ. ಇತ್ತೀಚೆಗೆ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಜಾರಕಿಹೊಳಿ ಬ್ರದರ್ಸ್ ಗೆಲುವಿನ ಸಂಭ್ರಮದಲ್ಲಿ ಮುಳುಗಿದ್ದರೆ, ಇದೀಗ ಲಕ್ಷ್ಮಣ ಸವದಿ ಸಹೋದರರು ಅವರಿಗೆ ಭಾರೀ ಶಾಕ್ ನೀಡಿದ್ದಾರೆ.
ಅಥಣಿ ಮತ್ತು ಚಿಕ್ಕೋಡಿ ಸಹಕಾರಿ ಸಂಘಗಳ ಚುನಾವಣೆಯಲ್ಲಿ ಲಕ್ಷ್ಮಣ ಸವದಿ ಬೆಂಬಲಿತ ಪ್ಯಾನೆಲ್ ಭರ್ಜರಿ ಗೆಲುವು ಸಾಧಿಸಿದೆ. ವಿಶೇಷವಾಗಿ ಅಥಣಿ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕರ ಚುನಾವಣೆಯಲ್ಲಿ ಸವದಿ ಪ್ಯಾನೆಲ್ ಸಂಪೂರ್ಣ ಪ್ರಾಬಲ್ಯ ಸಾಧಿಸಿ, 12 ಸ್ಥಾನಗಳನ್ನೂ ಕ್ಲೀನ್ ಸ್ವೀಪ್ ಮಾಡಿದೆ.
ಅಥಣಿಯ ಕೃಷ್ಣಾ ಸಹಕಾರಿ ಸಕ್ಕರೆ ಸಂಘದ ಚುನಾವಣೆ ಜಾರಕಿಹೊಳಿ ಸಹೋದರರ ಬಣ ಮತ್ತು ಲಕ್ಷ್ಮಣ ಸವದಿ ಬಣಗಳ ನಡುವೆ ತೀವ್ರ ಸ್ಪರ್ಧೆ ಮೂಡಿಸಿತ್ತು. ಅಂತಿಮವಾಗಿ ಸವದಿ ಬಣವು ಎಲ್ಲಾ 12 ಸ್ಥಾನಗಳನ್ನೂ ಗೆದ್ದು ಜಯಭೇರಿ ಬಾರಿಸಿದೆ. ಸಂಘದ ಹಾಲಿ ಅಧ್ಯಕ್ಷ ಪರಪ್ಪ ಸವದಿ ಅವರ ನೇತೃತ್ವದ ‘ರೈತ ಸಹಕಾರಿ ಪ್ಯಾನೆಲ್’ ಭರ್ಜರಿ ಗೆಲುವು ಸಾಧಿಸಿದ್ದು, ರಮೇಶ್ ಜಾರಕಿಹೊಳಿ ಬೆಂಬಲಿತ ‘ಸ್ವಾಭಿಮಾನ ರೈತ ಪ್ಯಾನೆಲ್’ ಸಂಪೂರ್ಣ ಸೋಲು ಕಂಡಿದೆ.
ಚಿಕ್ಕೋಡಿ ಮತ್ತು ಅಥಣಿಯ ಈ ಎರಡು ಪ್ರಮುಖ ಸಹಕಾರಿ ಸಂಘಗಳ ಚುನಾವಣಾ ಫಲಿತಾಂಶಗಳು ಬೆಳಗಾವಿ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿವೆ. ಈ ಗೆಲುವಿನಿಂದ ಸವದಿ ಸಹೋದರರು ತಮ್ಮ ರಾಜಕೀಯ ಬಲವನ್ನು ಮತ್ತೆ ಸಾಬೀತುಪಡಿಸಿದ್ದು, ಇತ್ತೀಚೆಗೆ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಗೆದ್ದು ಬೀಗುತ್ತಿದ್ದ ಜಾರಕಿಹೊಳಿ ಬ್ರದರ್ಸ್ ಗೆ ಮುಖಭಂಗ ಉಂಟಾಗಿದೆ.
ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಕತ್ತಿ ಕುಟುಂಬದ ವಿರುದ್ಧ ಹಿನ್ನಡೆ ಅನುಭವಿಸಿದರೆ, ಇದೀಗ ಅವರ ಸಹೋದರ ರಮೇಶ್ ಜಾರಕಿಹೊಳಿ ಲಕ್ಷ್ಮಣ ಸವದಿಗೆ ಸೆಡ್ಡು ಹೊಡೆದು ಅಥಣಿ ತಾಲೂಕಿನ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿದ್ದಾರೆ.
ಒಟ್ಟಿನಲ್ಲಿ, ಬೆಳಗಾವಿ ರಾಜಕೀಯದಲ್ಲಿ ಕುಟುಂಬ ಪೈಪೋಟಿ ಮತ್ತೊಮ್ಮೆ ತೀವ್ರಗೊಂಡಿದೆ. ಡಿಸಿಸಿ ಬ್ಯಾಂಕ್ ಗೆಲುವಿನಿಂದ ಉತ್ಸಾಹಗೊಂಡಿದ್ದ ಜಾರಕಿಹೊಳಿ ಸಹೋದರರಿಗೆ ಸವದಿ ಬ್ರದರ್ಸ್ ನಿಂದ ಭಾರೀ ಶಾಕ್ ಸಿಕ್ಕಂತಾಗಿದೆ. ಸಹಕಾರಿ ಸಂಸ್ಥೆಗಳ ಚುನಾವಣೆಯಲ್ಲಿ ಸವದಿ ಪ್ಯಾನೆಲ್‌ನ ಈ ಕ್ಲೀನ್ ಸ್ವೀಪ್ ಮುಂದಿನ ಸ್ಥಳೀಯ ರಾಜಕೀಯ ಸಮೀಕರಣಗಳಿಗೂ ಪ್ರಭಾವ ಬೀರುವ ಸಾಧ್ಯತೆ ಇದೆ.
ವರದಿ : ಲಾವಣ್ಯ ಅನಿಗೋಳ

