ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಜಯದೇವ ಮಾದರಿಯಲ್ಲೇ ಹೃದ್ರೋಗ ಆಸ್ಪತ್ರೆ ಪ್ರಾರಂಭದ ಕೂಗು ಹೆಚ್ಚಾಗಿದೆ. ಜಿಲ್ಲೆಯ ಜನರಷ್ಟೇ ಅಲ್ಲ, ಜನಪ್ರತಿನಿಧಿಗಳೂ ಕೂಡ ಈ ವಿಚಾರದಲ್ಲಿ ಒಗ್ಗಟ್ಟಾಗಿದ್ದಾರೆ. ಈಗಾಗಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಂಡ, ಹಾಸನ ಜಿಲ್ಲೆಗೆ ಆಗಮಿಸಿ ಪರಿಶೀಲನೆ ನಡೆಸಿದೆ. ಶೀಘ್ರವೇ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಕೆ ಸಾಧ್ಯತೆ ಇದೆ.
ಅರಸೀಕೆರೆಯಲ್ಲಿ ಜುಲೈ 26ರಂದು, ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮ ಇದೆ. ಸಿಎಂ ಸಿದ್ದರಾಮಯ್ಯ ಸೇರಿ ಸಂಪುಟದ ಹಲವು ಸಚಿವರೂ ಬರುತ್ತಿದ್ದಾರೆ. ಇದೇ ವೇಳೆ ಜಿಲ್ಲೆಯಲ್ಲಿ ಹೃದ್ರೋಗ ಆಸ್ಪತ್ರೆ ನಿರ್ಮಾಣಕ್ಕೆ, ಅನುದಾನ ಘೋಷಣೆ ಮಾಡಿಸೋ ಪ್ರಯತ್ನದಲ್ಲಿ ಜನಪ್ರತಿನಿಧಿಗಳು ಇದ್ದಾರೆ.
ಹಾಸನ ಜಿಲ್ಲೆಯಲ್ಲಿ, 2 ವರ್ಷದಲ್ಲಿ 507 ಹೃದಯಾಘಾತ ಪ್ರಕರಣಗಳು ಸಂಭವಿಸಿದ್ದು, 140 ಜನರು ಸಾವನ್ನಪ್ಪಿದ್ದಾರೆ. 2025ರ ಆರಂಭದಿಂದಲೂ ಯುವಜನರಲ್ಲೇ ಹಾರ್ಟ್ ಅಟ್ಯಾಕ್ ಹೆಚ್ಚಾಗಿದೆ. ಇದು ಜಿಲ್ಲೆಯ ಜನರನ್ನು ಬೆಚ್ಚಿಬೀಳುವಂತೆ ಮಾಡಿದೆ. ರಾಜ್ಯ ಸರ್ಕಾರ ಈಗಾಗಲೇ ತಜ್ಞರ ಸಮಿತಿ ಮೂಲಕ, ಅಧ್ಯಯನ ವರದಿಯನ್ನೂ ತರಿಸಿಕೊಂಡಿದೆ. ಜೊತೆಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆಯೂ, ಸ್ಥಳೀಯ ಆಡಳಿತಕ್ಕೆ ಸೂಚಿಸಿದೆ.
ಹಾಸನ ಜಿಲ್ಲಾಸ್ಪತ್ರೆ ಬಳಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡದ ಕಾಮಗಾರಿ, ಪೂರ್ಣಗೊಂಡಿದೆ. ಹೃದ್ರೋಗ ಚಿಕಿತ್ಸೆಗೆ ಯಂತ್ರೋಪಕರಣ, ಮತ್ತಿತರೆ ಸೌಲಭ್ಯ, ತಜ್ಞ ವೈದ್ಯರು, ಸಿಬ್ಬಂದಿ, ವೈದ್ಯಕೀಯೇತರ ಸಿಬ್ಬಂದಿ ನೇಮಕಕ್ಕೆ, ಕನಿಷ್ಠ 50 ಕೋಟಿ ಅನುದಾನದ ಅಗತ್ಯವಿದೆ. ಜೊತೆಗೆ ಮೂತ್ರಪಿಂಡ, ನರ ರೋಗ, ಕ್ಯಾನ್ಸರ್ ಸೇರಿ ಹಲವಾರು ಮಾರಣಾಂತಿಕ ರೋಗಗಳ ತಪಾಸಣೆ ಮತ್ತು ಚಿಕಿತ್ಸೆಗೆ ವೈದ್ಯಕೀಯ ವಿಭಾಗಗಳು, ಲ್ಯಾಬ್, ಪ್ರತ್ಯೇಕ ಶಸ್ತ್ರ ಚಿಕಿತ್ಸಾ ಘಟಕಗಳನ್ನು ಕೂಡಲೇ ಆರಂಭಿಸುವಂತೆ ಆಗ್ರಹ ಕೇಳಿ ಬರ್ತಿದೆ.