Wednesday, August 20, 2025

Latest Posts

CM ಸಿದ್ದರಾಮಯ್ಯಗೆ ಜೆಡಿಎಸ್ ತರಾಟೆ!

- Advertisement -

ವಿಧಾನಸಭಾ ಅಧಿವೇಶನ ನಡೆಯುತ್ತಿರುವಾಗಲೇ ಕಾಂಗ್ರೆಸ್ ಪಕ್ಷ ಸಚಿವರ ತಲೆದಂಡ ಪಡೆದಿದೆ. ರಾಜಣ್ಣ ಅವರ ಕಿಕ್‌ ಔಟ್, ಸರ್ಕಾರವನ್ನು ಕಟ್ಟಿ ಹಾಕಲು ಪ್ರಯತ್ನಿಸುತ್ತಿದ್ದ ವಿರೋಧ ಪಕ್ಷಗಳಿಗೆ ಹೊಸ ಅಸ್ತ್ರವಾಗಿದೆ. ಸದನದ ಒಳಗೂ-ಹೊರಗೂ ಹೋರಾಡುತ್ತಿದ್ದ ಜೆಡಿಎಸ್ ನಾಯಕರು ಸಿಎಂ ಸಿದ್ದರಾಮಯ್ಯ ಮೇಲೆ ವಾಗ್ಬಾಣಗಳನ್ನ ಬಿಟ್ಟಿದ್ದಾರೆ.

ಕಾಂಗ್ರೆಸ್ ವಿರುದ್ಧ ಕಿಡಿಕಾರಿರುವ ಜೆಡಿಎಸ್, ಟ್ವೀಟ್ ಮಾಡೋ ಮೂಲಕ ಸಿಎಂ ಸಿದ್ದರಾಮಯ್ಯರನ್ನ ತರಾಟೆಗೆ ತೆಗೆದುಕೊಂಡಿದೆ. ಅಹಿಂದ…. ಅಹಿಂದ…. ಎನ್ನುತ್ತಲೇ ಹಿಂದುಳಿದ ದಲಿತ ನಾಯಕರನ್ನು ತುಳಿಯುತ್ತಿರುವ ಮಜವಾದಿ ಸಿದ್ದರಾಮಯ್ಯ ಅವರಾಗಿದ್ದಾರೆ. ಮುಖ್ಯಮಂತ್ರಿಗಳೇ ನಿಮ್ಮ ಅಧಿಕಾರದ ದುರಾಸೆಗೆ ವಾಲ್ಮೀಕಿ ಸಮುದಾಯದ ಮತ್ತೊಬ್ಬ ದಲಿತ ನಾಯಕನನ್ನು ಬಲಿಕೊಟ್ಟಿದ್ದೀರಿ. ಪರಮಾಪ್ತ ಕೆ.ಎನ್‌. ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ಕಿತ್ತು ಹಾಕಿದ ನಿಮ್ಮ ಸ್ವಾರ್ಥ ರಾಜಕಾರಣಕ್ಕೆ ನಾಚಿಕೆಯಾಗಬೇಕು ಎಂದು ಜೆಡಿಎಸ್ ಕಿಡಿಕಾರಿದೆ.

ಹಿಂದೆ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ಲೂಟಿ ಹೊಡೆದು ತೆಲಂಗಾಣ ಮತ್ತು ಬಳ್ಳಾರಿ ಚುನಾವಣೆಯಲ್ಲಿ ಅಕ್ರಮವಾಗಿ ಹಣ ಬಳಸಿಕೊಂಡು, ಬಿ. ನಾಗೇಂದ್ರ ಅವರನ್ನು ಬಲಿಪಶು ಮಾಡಿ ಜೈಲಿಗೆ ಅಟ್ಟಿದಿರಿ. ಈಗ ಮತಗಳ್ಳತನದ ಬಗ್ಗೆ ಸುಳ್ಳು ಆರೋಪ ಮಾಡಿರುವ ರಾಹುಲ್ ಗಾಂಧಿಯನ್ನು ಮೆಚ್ಚಿಸಲು ಹೋಗಿದ್ದಾರೆ. ಸತ್ಯ ಹೇಳುವವರ ಬಾಯಿ ಮುಚ್ಚಿಸಲು ರಾಜಣ್ಣ ಅವರ ತಲೆದಂಡ ಮಾಡಲಾಗಿದೆ.

ಹಿಂದುಳಿದ ವರ್ಗಗಳ ನೇತಾರ ದಿ.ದೇವರಾಜ್‌ ಅರಸು ಅವರ ದಾಖಲೆಯನ್ನು ಮುರಿಯಬೇಕು ಎಂಬ ಹಪಾಹಪಿಯಲ್ಲಿರುವ ಸಿದ್ದರಾಮಯ್ಯ, ದಲಿತ ನಾಯಕರಿಗೆ ಚೂರಿ ಹಾಕಲು ಹಿಂಜರಿಯುವುದಿಲ್ಲ ಎಂಬುದಕ್ಕೆ ರಾಜಣ್ಣಗೆ ಆಗಿರುವ ಈ ಘೋರ ಅನ್ಯಾಯವೇ ಸಾಕ್ಷಿ. ರಾಜಣ್ಣ ಮಾಡಿದ ಅಪರಾಧವಾದರೂ ಏನು? ಸಿದ್ದರಾಮಯ್ಯ ಅವರೇ, ದಲಿತ ಸಮುದಾಯಕ್ಕೆ ವಂಚಿಸಿ ಅಧಿಕಾರದಲ್ಲಿ ಮುಂದುವರಿಯಲು ನಿಮ್ಮ ಆತ್ಮಸಾಕ್ಷಿಯಾದರೂ ಹೇಗೆ ಒಪ್ಪುತ್ತದೆ? ಎಂದು ಜೆಡಿಎಸ್ ಪ್ರಶ್ನಿಸಿದೆ.

- Advertisement -

Latest Posts

Don't Miss