ಹಾಸನ ಪಾಲಿಕೆಗೆ ಜೆಡಿಎಸ್‌ ಮೇಯರ್!

ಹಾಸನ ಮಹಾನಗರ ಪಾಲಿಕೆಯ ನೂತನ ಮೇಯರ್‌ ಆಗಿ, 8ನೇ ವಾರ್ಡ್‌ನ ಜೆಡಿಎಸ್‌ ಸದಸ್ಯ ಗಿರೀಶ್‌ ಚನ್ನವೀರಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಮೇಯರ್‌ ಆಗಿದ್ದ ಎಂ. ಚಂದ್ರೇಗೌಡರ ಸದಸ್ಯತ್ವ ಅನರ್ಹಗೊಂಡ ನಂತರ, ಮೇಯರ್‌ ಸ್ಥಾನ ಖಾಲಿಯಾಗಿತ್ತು. ಮೇಯರ್‌ ಸ್ಥಾನಕ್ಕೆ ಸೆಪ್ಟೆಂಬರ್‌ 10ರಂದು ಚುನಾವಣೆ ನಿಗದಿಯಾಗಿತ್ತು. ಆದ್ರೆ, ಮೈಸೂರು ಪ್ರಾದೇಶಿಕ ಆಯುಕ್ತರು ವರ್ಗಾವಣೆಗೊಂಡ ಹಿನ್ನೆಲೆ, ಮುಂದೂಡಲಾಗಿತ್ತು.

ಮೇಯರ್‌ ಸ್ಥಾನಕ್ಕೆ ಗಿರೀಶ್‌ ಚನ್ನವೀರಪ್ಪ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಚುನಾವಣಾ ಅಧಿಕಾರಿಯಾಗಿದ್ದ ಮೈಸೂರು ಪ್ರಭಾರ ಪ್ರಾದೇಶಿಕ ಆಯುಕ್ತ ವೆಂಕಟರಾಜ ಸಮ್ಮುಖದಲ್ಲಿ, ಮೇಯರ್‌ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಯ್ತು. ಚಂದ್ರೇಗೌಡರ ಅನರ್ಹತೆಯಿಂದಾಗಿ ಪಾಲಿಕೆ ಒಟ್ಟು ಸದಸ್ಯ ಬಲ 34ಕ್ಕೆ ಕುಸಿದಿತ್ತು. ಜೆಡಿಎಸ್‌ 16, ಬಿಜೆಪಿ 13, ಪಕ್ಷೇತರ 3 ಹಾಗೂ ಕಾಂಗ್ರೆಸ್ಸಿನ ಇಬ್ಬರು ಸದಸ್ಯರಿದ್ದರು.

ಇತರರ ಬೆಂಬಲ ಪಡೆದು ಬಿಜೆಪಿ ಸ್ಪರ್ಧಿಸಬಹುದೆಂಬ ನಿರೀಕ್ಷೆ ಇತ್ತು. ಆದರೆ, ಅಂತಹ ಯಾವುದೇ ಬೆಳವಣಿಗೆಗಳು ನಡೆಯಲಿಲ್ಲ. ಮೇಯರ್‌ ಚುನಾವಣೆಯಿಂದ ಬಿಜೆಪಿ ಹೊರಗುಳಿಯಿತು. ಜೊತೆಗೆ ಬಿಜೆಪಿ ಪಕ್ಷದ ಸದಸ್ಯರು ಯಾರೊಬ್ಬರು ಸಭೆಗೆ ಬಂದಿರಲಿಲ್ಲ.

ಮೇಯರ್‌ ಆಯ್ಕೆ ಪ್ರಕ್ರಿಯೆ ಬಳಿಕ ಮಾತನಾಡಿರುವ ಶಾಸಕ ಸ್ವರೂಪ್‌ ಪ್ರಕಾಶ್‌ ಅಭಿನಂದಿಸಿದ್ದಾರೆ. ನಮ್ಮ ತಂದೆ ಹೆಚ್‌.ಎಸ್‌. ಪ್ರಕಾಶ್‌ ಶಾಸಕರಾಗಿದ್ದಅವಧಿಯಲ್ಲಿ, ನಗರಸಭೆ ಅಧ್ಯಕ್ಷರಾಗಿ ಚನ್ನವೀರಪ್ಪ ಅವರು ಉತ್ತಮ ಕೆಲಸ ಮಾಡಿದ್ದಾರೆ. ಈಗ ಅವರ ಮಗ ಗಿರೀಶ್‌ ಚನ್ನವೀರಪ್ಪ ಇಂದು ಮೇಯರ್‌ ಆಗಿ ಆಯ್ಕೆಯಾಗಿದ್ದು, ಉತ್ತಮ ಆಡಳಿತ ನೀಡುವ ವಿಶ್ವಾಸ ಇದೆ ಅಂತಾ ಹೇಳಿದ್ದಾರೆ.

About The Author