ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕುರಿತು ಡಾ.ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆ, ಭಾರೀ ಚರ್ಚೆಗೆ ಕಾರಣವಾಗಿದೆ. ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇದೀಗ ಯತೀಂದ್ರ ಹೇಳಿಕೆಯನ್ನು ಖಂಡಿಸಿ JDS ನಗರ ಸಮಿತಿ ಸದಸ್ಯರು ಗಾಂಧಿ ವೃತ್ತದಲ್ಲಿ ಪ್ರತಿಭಟನೆ ಮಾಡಿದ್ದಾರೆ.
ವಿಧಾನಪರಿಷತ್ ಸದಸ್ಯ ವಿವೇಕಕಾನಂದ ಮಾತನಾಡಿ, ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ರೀತಿ ಯಾರೂ ಕೆಲಸ ಮಾಡಲು ಸಾಧ್ಯವಿಲ್ಲ. ಅವರು ಧಾರ್ಮಿಕ, ರಾಜಕೀಯ, ನೀರಾವರಿ, ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತಂದಿದ್ದಾರೆ. ಕನ್ನಂಬಾಡಿ ಕಟ್ಟೆ ನಿರ್ಮಿಸಿ ಕೋಟ್ಯಂತರ ಜನರಿಗೆ ನೀರು ಒದಗಿಸಿದ್ದಾರೆ. ಸಿದ್ದರಾಮಯ್ಯ ಅವರು ಈ ರೀತಿಯ ಕೆಲಸ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು.
ನಾಲ್ವಡಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಆರಾಧಿಸುವವರಿದ್ದಾರೆ. ಯತೀಂದ್ರ ಸಿದ್ದರಾಮಯ್ಯ ಹೇಳಿಕೆಯಿಂದ ಅವರ ಭಾವನೆಗೆ ಧಕ್ಕೆಯಾಗಿದೆ. ಸಿದ್ದರಾಮಯ್ಯ ಹಿಂಬಾಗಿಲಿನಿಂದ ರಾಜಕಾರಣ ಮಾಡಿ ಕಾಂಗ್ರೆಸ್ ಸೇರಿದವರು, ಅವರಿಗೆ ಸ್ವಂತ ಶಕ್ತಿಯಿದ್ದರೆ ಅಹಿಂದ ಕಟ್ಟಿ ಹತ್ತು ಸ್ಥಾನ ಗೆಲ್ಲಲಿ, ಅವರು ಗೆದ್ದರೆ ನಾನು ರಾಜೀನಾಮೆ ನೀಡುತ್ತೇನೆ. ಅವರು ಹೇಳಿಕೆಗಳನ್ನು ನೀಡುವ ಬದಲು ಬಡವರ ಪರವಾಗಿ ಕೆಲಸ ಮಾಡಲಿ. ಮಹಾರಾಜ, ಮಹಾರಾಣಿ ಕಾಲೇಜಿನಲ್ಲಿ ನೀರು ಸೋರುತ್ತಿದ್ದು ಅದನ್ನು ದುರಸ್ತಿಗೊಳಿಸಲಿ ಎಂದು ಕಿಡಿಕಾರಿದ್ದಾರೆ.
ಜೆಡಿಎಸ್ ನಗರಾಧ್ಯಕ್ಷ ಕೆ.ಟಿ.ಚಲುವೇಗೌಡ ಮಾತನಾಡಿ, ಯತೀಂದ್ರ ಅವರು ಮೈಸೂರಿನ ಇತಿಹಾಸ ಅರಿಯದೆ ಮಾತನಾಡಿದ್ದಾರೆ. ನಾಲ್ವಡಿ ಅವರು ಮಡದಿಯ ಚಿನ್ನಾಭರಣ ಅಡವಿಟ್ಟು ಅಭಿವೃದ್ಧಿ ಕೆಲಸ ಮಾಡಿದ್ದರು. ಆದರೆ ಸಿದ್ದರಾಮಯ್ಯ ಮುಡಾದಲ್ಲಿ ಅಧಿಕಾರಿಗಳ ಪ್ರಭಾವ ಬಳಸಿ ಪತ್ನಿಯ ಹೆಸರಿಗೆ ದುರ್ಮಾರ್ಗದಲ್ಲಿ ಸೈಟ್ ಪಡೆದು ತಲೆತಗ್ಗಿಸುವ ಕೆಲಸ ಮಾಡಿದ್ದಾರೆ. ಅವರನ್ನು ನಾಲ್ವಡಿ ವ್ಯಕ್ತಿತ್ವದೊಂದಿಗೆ ಹೋಲಿಸಿರುವುದರಿಂದ ಅನೇಕರ ಮನಸ್ಸಿಗೆ ನೋವಾಗಿದೆ. ಸಿದ್ದರಾಮಯ್ಯ ಹಾಗೂ ಯತೀಂದ್ರ ಸಿದ್ದರಾಮಯ್ಯ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ವಿಧಾನ ಪರಿಷತ್ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ