ಭೋವಿ ನಿಗಮದಲ್ಲಿ ಬರೋಬ್ಬರಿ ಕಮಿಷನ್ ದಂಧೆ ನಡೆಯುತ್ತಿರುವ ಆರೋಪ ಕೇಳಿ ಬಂದಿದೆ. ಈ ವಿಚಾರಕ್ಕೆ ಜೆಡಿಎಸ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತೀವ್ರವಾಗಿ ಖಂಡಿಸಿದೆ. ಸರ್ಕಾರದಲ್ಲಿ ನಡೆಯುತ್ತಿರುವ 60% ಕಮಿಷನ್ ದಂಧೆಗೆ ಇದು ಮತ್ತೊಂದು ಸ್ಪಷ್ಟ ಸಾಕ್ಷಿಯಾಗಿದೆ ಎಂದು ಜೆಡಿಎಸ್ ಆರೋಪಿಸಿದೆ.
ಭೋವಿ ನಿಗಮದ ಅಧ್ಯಕ್ಷ ರವಿಕುಮಾರ್ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ನಿಗಮದಿಂದ ಭೂಸ್ವಾಮ್ಯ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಬಿಡುಗಡೆಗೊಳ್ಳಬೇಕಾದ ₹25 ಲಕ್ಷ ಸಹಾಯಧನಕ್ಕಾಗಿ ಪ್ರತಿ ಅರ್ಜಿದಾರರಿಂದ ₹5 ಲಕ್ಷ ಕಮಿಷನ್ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಜೆಡಿಎಸ್, ಇದು ಸರಳ ಭ್ರಷ್ಟಾಚಾರವಲ್ಲ. ಇದು ಪರಿಶಿಷ್ಟ ವರ್ಗದ ಹಕ್ಕುಗಳನ್ನು ಲೂಟಿ ಮಾಡುವ ಕ್ರಿಮಿನಲ್ ಕೃತ್ಯ. ಭೋವಿ ನಿಗಮದ ಅಧ್ಯಕ್ಷನ ವಿರುದ್ಧ ತಕ್ಷಣ ತನಿಖೆ ನಡೆಸಿ, ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿದೆ.
ನಿಗಮದ ಅನೇಕ ಯೋಜನೆಗಳಲ್ಲಿ ಕೋಟ್ಯಂತರ ರೂಪಾಯಿ ಹಗರಣ ನಡೆಯುತ್ತಿದೆ. SCSP ಮತ್ತುTSP ನಿಧಿಗಳ ನೂರಾರು ಕೋಟಿ ರೂಪಾಯಿ ದುರ್ಬಳಕೆಯಾಗಿವೆ. ಈ ಮೂಲಕ ದಲಿತ ಸಮುದಾಯದ ಹಕ್ಕುಗಳಿಗೆ ಅಪಮಾನವಾಗಿದೆ. ಇದು ದಲಿತ ವಿರೋಧಿ ಮತ್ತು ಜನ ವಿರೋಧಿ ಆಡಳಿತದ ಜೀವಂತ ಉದಾಹರಣೆ ಎಂದಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ದುರಾಡಳಿತ ಮಿತಿಮೀರಿದೆ. ಪರಿಶಿಷ್ಟ ವರ್ಗದ ಬೆನ್ನಿಗೆ ಚೂರಿ ಹಾಕುವ ಧೋರಣೆಯನ್ನು ತಕ್ಷಣ ನಿಲ್ಲಿಸಬೇಕು ಎಂದು ಜೆಡಿಎಸ್ ತೀವ್ರವಾಗಿ ಒತ್ತಾಯಿಸಿದೆ.