ಅಂಬಾನಿಯ ವನ್ಯಧಾಮಕ್ಕೆ ಜೈನಮಠದ ಆನೆ ಹಸ್ತಾಂತರಗೊಂಡಿದೆ. ಇದರ ವಿರುದ್ಧ ಜೈನ ಸಮುದಾಯ ಆಕ್ರೋಶ ತೀವ್ರಗೊಂಡಿದೆ. ಇದು ಕೇವಲ ಪ್ರಾಣಿ ಹಸ್ತಾಂತರವಲ್ಲ, ಧರ್ಮ, ನಂಬಿಕೆ ಮತ್ತು ಸಂಸ್ಕೃತಿಯ ನಡುವೆ ವಿವಾದ ಭುಗಿಲೆದ್ದಿದೆ.
36 ವರ್ಷದ ಆನೆ, ಮಹಾದೇವಿ ಅಥವಾ ಮಾಧುರಿ ಎಂದೇ ಪರಿಚಿತ. ಮೂಲತಃ ಕರ್ನಾಟಕದಲ್ಲಿ ಜನಿಸಿದ ಈ ಆನೆ, 1992ರಲ್ಲಿ ಅಂದರೆ ತಾನು 3 ವರ್ಷದಾಗಿದ್ದಾಗ ಕೊಲ್ಹಾಪುರದ ಜೈನ ಮಠಕ್ಕೆ ಹಸ್ತಾಂತರಗೊಂಡಿತ್ತು.
30 ವರ್ಷಗಳಿಂದ ಮಠದ ಭಾಗವಾಗಿ ಬದುಕುತ್ತಿದ್ದ ಈ ಆನೆ, ಜೈನ ಧರ್ಮಗುರು ಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಯವರ ಪಕ್ಕದಲ್ಲೇ ಆರಾಧನೆಯ ಚಿಹ್ನೆಯಾಗಿ ಬೆಳೆಯಿತು. ಜಾತ್ರೆಗಳು, ಧಾರ್ಮಿಕ ಉತ್ಸವಗಳಲ್ಲಿ ಈ ಆನೆ ಪ್ರಮುಖವಾಗಿತ್ತು.
ಕಳೆದ ಕೆಲವು ವರ್ಷಗಳಿಂದ ಆನೆಯ ಆರೋಗ್ಯ ಹದಗೆಡುತ್ತಿತ್ತು. ಅದರ ಮಾನಸಿಕ ಸ್ಥಿತಿಯೂ ತಪ್ಪುತ್ತಿದೆ ಎಂದು ಕೆಲವು ಪ್ರಾಣಿದಯಾ ಸಂಘಟನೆಗಳು ಅಭಿಪ್ರಾಯ ವ್ಯಕ್ತಪಡಿಸಿತ್ತು. ಜುಲೈ 16, 2025ರಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿತು. ಆನೆಯನ್ನು ಗುಜರಾತ್‌ನ ವನತಾರಾ ಪ್ರಾಣಿ ರಕ್ಷಣಾ ಕೇಂದ್ರಕ್ಕೆ ಸ್ಥಳಾಂತರಿಸಿ ಪುನರ್ವಸತಿ ನೀಡಬೇಕು. ಈ ತೀರ್ಪು ಸುಪ್ರೀಂ ಕೋರ್ಟ್‌ನಲ್ಲೂ ಪ್ರಶ್ನಿಸಲಾಯ್ತು, ಆದರೆ ಸುಪ್ರೀಂ ಕೋರ್ಟ್ ಸಹ ಹೈಕೋರ್ಟ್‌ನ ತೀರ್ಪನ್ನು ಬೆಂಬಲಿಸಿತು.
ಅನಂತ್ ಅಂಬಾನಿ ನಿರ್ವಹಿಸುತ್ತಿರುವ ಗುಜರಾತ್‌ನ ವನತಾರಾ ಪ್ರಾಣಿ ರಕ್ಷಣಾ ಕೇಂದ್ರದಲ್ಲಿ ಅನೇಕ ವನ್ಯಜೀವಿಗಳನ್ನು ಸಂರಕ್ಷಿಸಲಾಗುತ್ತಿದೆ. ಆನೆ, ಚಿರತೆ, ಹುಲಿ, ನೆಗೆ, ಮೃಗಗಳು ಎಲ್ಲವೂ ಇಲ್ಲಿ ವಿಶೇಷ ಆರೈಕೆ ಪಡೆಯುತ್ತಿವೆ. ವಿದೇಶೀ ತಜ್ಞರು, ಸಂಪೂರ್ಣ ವೈದ್ಯಸಂಬಂಧಿ ಸೇವೆ, ವಿಶಿಷ್ಟ ಆಹಾರ ವ್ಯವಸ್ಥೆ ಇವೆಲ್ಲವನ್ನೂ ನೀಡಲಾಗುತ್ತಿದೆ. ಮಹಾದೇವಿಯ ಸ್ಥಿತಿಗೆ ಇದು ಸೂಕ್ತವೆಂದು ನ್ಯಾಯಾಲಯ ನಿರ್ಧರಿಸಿದೆ.
ಆದರೆ ಜೈನ ಸಮುದಾಯ ಇದನ್ನು ಧರ್ಮ ಮತ್ತು ಸಂಸ್ಕೃತಿಯ ಹಿಂಸೆ ಎಂದು ಪರಿಗಣಿಸುತ್ತಿದೆ. ಆನೆ ನಮ್ಮ ಧರ್ಮದ ಪ್ರತೀಕ, ದೇವಾಲಯದ ಭಾಗವಾಗಿದೆ. ಇದು ಕೇವಲ ಪ್ರಾಣಿ ಅಲ್ಲ ಎಂದು ಜನ ಹೇಳುತ್ತಿದ್ದಾರೆ.
1.25 ಲಕ್ಷಕ್ಕೂ ಹೆಚ್ಚು ಜನರು ರಾಷ್ಟ್ರಪತಿಗೆ ಮನವಿ ಪತ್ರ ಕಳಿಸಲು ಸಹಿ ಹಾಕಿದ್ದಾರೆ. ಜಿಯೋ ಸಿಮ್‌ಗಳನ್ನು ಬದಲಾಯಿಸುವ ಮೂಲಕ ಅನಂತ್ ಅಂಬಾನಿ ಹಾಗೂ ರಿಲಯನ್ಸ್ ವಿರೋಧವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಗಳು, ಧಾರ್ಮಿಕ ಸಭೆಗಳು, ಬಹಿಷ್ಕಾರ ಚಳವಳಿ – ಎಲ್ಲವೂ ತೀವ್ರಗೊಂಡಿವೆ.