www.karnatakatv.net: ಸಿಆರ್ ಪಿ ಎಫ್ ನ ಮಹಿಳಾ ಸಿಬ್ಬಂದಿ ಜಮ್ಮು ಕಾಶ್ಮೀರದಲ್ಲಿ ಮಹಿಳೆಯರ ತಪಾಸಣೆ ನಡೆಸುತ್ತಿದ್ದಾರೆ. ಇದಕ್ಕೆ ಅನೇಕ ಮಹಿಳೆಯರು ಸಾರ್ವಜನಿಕರ ಕಣ್ಣಿಗೆ ಬೀಳದಂತೆ ತಪಾಸಣೆಯನ್ನು ನಡೆಸಬಹುದಿತ್ತು ಎಂಬ ಅಭಿಪ್ರಾಯವನ್ನೂ ವ್ಯಕ್ತ ಪಡಿಸಿದ್ದಾರೆ.
ಸಿಆರ್ ಪಿಎಫ್ ಮಹಿಳಾ ಸಿಬ್ಬಂದಿಗಳು ಕನಿಷ್ಠ ಪಕ್ಷ ಮರೆಯಲ್ಲಾದರು ನಿಂತು ತಪಾಸನೆ ಮಾಡುವ ವ್ಯವಸ್ಥೆಯನ್ನು ಮಾಡಿಕೊಂಡಿಲ್ಲ ಎಂದು ಫರೀದಾ ಎಂಬ ಮಹಿಳೆ ಹೇಳಿದ್ದಾರೆ. “ತಪಾಸಣೆ ಮಾಡುವುದಕ್ಕೆ ನಮ್ಮ ಅಡ್ಡಿ ಇಲ್ಲ. ಆದರೆ ಮಾಡುವ ರೀತಿಯ ಬಗ್ಗೆ ಆಕ್ಷೇಪವಿದೆ” ಎಂದು ತಮ್ಮ ಅನಿಸಿಕೆಯನ್ನು ಹೇಳಿಕೊಂಡಿದ್ದಾರೆ. ಲಾಲ್ ಚೌಕ್ ಪ್ರದೇಶದಲ್ಲಿ ಮಹಿಳಾ ಸಿಬ್ಬಂದಿಗಳು ಇದೇ ಮೊದಲ ಬಾರಿಗೆ ಮಹಿಳೆಯರನ್ನು ತಪಾಸಣೆಗೊಳಪಡಿಸಿದ್ದಾರೆ. ಕಾಶ್ಮೀರದಲ್ಲಿ ಜನಸಾಮಾನ್ಯರ ಹತ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಿಆರ್ ಪಿಎಫ್ ಈ ಕ್ರಮಕ್ಕೆ ಮುಂದಾಗಿದ್ದು, ಮಹಿಳೆಯರ ಬ್ಯಾಗ್ ಗಳನ್ನು ತಪಾಸಣೆಗೊಳಪಡಿಸಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ನಾಗರಿಕನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವ ಘಟನೆಗಳು ಹೆಚ್ಚುತ್ತಿವೆ.
ಬಿಹಾರ ಮೂಲದ ಇಬ್ಬರು ಕಾರ್ಮಿಕರ ಮೇಲೆ ನಡೆಸಿದ ದಾಳಿ ಹೊಣೆಯನ್ನು ಲಷ್ಕರ್-ಇ-ತೊಯ್ಬಾಗೆ ಸಂಬAಧಿಸಿದ ಯುನೈಟೆಡ್ ಲಿಬರೇಷನ್ ಫ್ರೆಂಟ್ ಹೊತ್ತುಕೊಂಡಿವೆ. ಕಣಿವೆ ರಾಜ್ಯವನ್ನು ತೊರೆಯುವಂತೆ ವಲಸೆ ಕಾರ್ಮಿಕರಿಗೆ ಭಯೋತ್ಪಾದಕ ಸಂಘಟನೆಗಳು ಭಯ ಹುಟ್ಟಿಸುತ್ತಿವೆ. ಈ ನಿಟ್ಟಿನಲ್ಲೇ ವಲಸೆ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಮೇಲಿಂದ ಮೇಲೆ ದಾಳಿ ನಡೆಸಲಾಗುತ್ತಿದೆ. ಕಳೆದ ಎರಡು ದಿನಗಳಲ್ಲಿ ಮೂರು ಕಡೆ ಉಗ್ರರು ವಲಸೆ ಕಾರ್ಮಿಕರ ಮೇಲೆ ದಾಳಿ ಮಾಡಿದ್ದಾರೆ. ಶನಿವಾರ ಬಿಹಾರ ಮೂಲಕ ಗೋಲ್ ಗಪ್ಪಾ ವ್ಯಾಪಾರಿ ಮತ್ತು ಉತ್ತರ ಪ್ರದೇಶದ ಮೂಲದ ವಲಸೆ ಕಾರ್ಮಿಕರನ್ನು ಉಗ್ರರು ಕೊಂದು ಹಾಕಿದ್ದಾರೆ. ಹತ್ತಾರು ಕುಟುಂಬಗಳು – ಕಾಶ್ಮೀರಿ ವಲಸಿಗರಿಗೆ ಪ್ರಧಾನ ಮಂತ್ರಿಗಳ ವಿಶೇಷ ಉದ್ಯೋಗ ಯೋಜನೆಯಡಿ ಕೆಲಸ ನೀಡಿದ ನಂತರ ಕಣಿವೆಗೆ ಮರಳಿದ ಅನೇಕ ಸರ್ಕಾರಿ ಉದ್ಯೋಗಿಗಳು ಸದ್ದಿಲ್ಲದೆ ಜಮ್ಮು ಕಾಶ್ಮೀರವನ್ನು ತೊರೆಯುತ್ತಿದ್ದಾರೆ.




