ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷವು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತಿದೆ ಎಂಬ ವದಂತಿಗಳು ತೀವ್ರವಾಗುತ್ತಿರುವ ಸಮಯದಲ್ಲಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಅಕಸ್ಮಾತ್ ಜಾರ್ಖಂಡ್ ಭೇಟಿಯು ರಾಜ್ಯ ರಾಜಕೀಯದಲ್ಲಿ ಹೊಸ ಕುತೂಹಲ ಹುಟ್ಟಿಸಿದೆ.
ಪಕ್ಷದ ವಕ್ತಾರ ಅನಿಲ್ ಬಲೂನಿ ಅವರ ಮಾಹಿತಿ ಪ್ರಕಾರ, ನಡ್ಡಾ ಅವರು ಎರಡು ದಿನಗಳ ಜಾರ್ಖಂಡ್ ಪ್ರವಾಸದ ಭಾಗವಾಗಿ ಶುಕ್ರವಾರ ಸಂಜೆ ದಿಯೋಘರ್‌ನ ಅತಿಥಿ ಗೃಹದಲ್ಲಿ ರಾಜ್ಯ ಬಿಜೆಪಿಯ ಕೋರ್ ಕಮಿಟಿ ಸಭೆಯನ್ನು ನಡೆಸಲಿದ್ದಾರೆ. ಇದರ ಹೊರತಾಗಿ ಅವರು ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಶನಿವಾರ ಅವರು ದಿಯೋಘರ್‌ನ ಬಾಬಾ ವೈದ್ಯನಾಥ್ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವ ನಿರೀಕ್ಷೆಯಿದೆ.
ಇದೆ ವೇಳೆಯಲ್ಲಿ, ಜಾರ್ಖಂಡ್ ಮುಖ್ಯಮಂತ್ರಿ ಹಾಗೂ ಜೆಎಂಎಂ ನಾಯಕ ಹೇಮಂತ ಸೊರೇನ್ ಅವರು ಈ ವಾರದ ಆರಂಭದಲ್ಲಿ ದೆಹಲಿಗೆ ಏಕಾಏಕಿ ಭೇಟಿ ನೀಡಿದ ವಿಚಾರ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಇದರಿಂದಾಗಿ ಅವರು ವಿರೋಧ ಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ಯಿಂದ ಹೊರಬಂದು ಎನ್‌ಡಿಎ ಸೇರುವ ಸಾಧ್ಯತೆಯ ಬಗ್ಗೆ ಊಹಾಪೋಹಗಳು ಹೆಚ್ಚಾಗಿವೆ. ಹೇಮಂತ ಸೊರೇನ್ ಹಾಗೂ ಅವರ ಪತ್ನಿ, ಶಾಸಕಿ ಕಲ್ಪನಾ ಅವರು ಹೊಸ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂಬ ವದಂತಿ ಹರಿದಿದ್ದರೂ, ಅದಕ್ಕೆ ಅಧಿಕೃತ ದೃಢೀಕರಣವಿಲ್ಲ.
2024ರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಜೊತೆ ನಡೆದ ಸೀಟು ಹಂಚಿಕೆ ಕುರಿತು ಜೆಎಂಎಂನ ಹಲವು ನಾಯಕರಲ್ಲಿ ಅಸಮಾಧಾನವಿದ್ದು, ಅದು ಈ ರಾಜಕೀಯ ಊಹಾಪೋಹಗಳಿಗೆ ಮತ್ತಷ್ಟು ಬಲ ತುಂಬಿದೆ ಎಂದು ತಿಳಿದುಬಂದಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ನ ಕೆಲವು ಶಾಸಕರು ಹೊಸ ಸರ್ಕಾರ ಸೇರಲು ಆಸಕ್ತಿ ತೋರಿಸುತ್ತಿದ್ದಾರೆಂಬ ಮಾತು ಕೂಡ ಹರಿದಾಡುತ್ತಿದೆ. ಇನ್ನೊಂದು ಕಾರಣವಾಗಿ, ಬಿಹಾರದಲ್ಲಿ ಬುಡಕಟ್ಟು ಸಮುದಾಯದ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಜೆಎಂಎಂನ ಆಸೆ, ಇಂಡಿಯಾ ಮೈತ್ರಿಕೂಟದ ಸೀಟು ಹಂಚಿಕೆ ಮಾತುಕತೆಗಳಲ್ಲಿ ಪೂರ್ಣವಾಗಿಲ್ಲ ಎಂಬ ಅಸಮಾಧಾನವೂ ಕಾಣಿಸುತ್ತಿದೆ.
ಜಾರ್ಖಂಡ್ ವಿಧಾನಸಭೆಯಲ್ಲಿ ಒಟ್ಟು 81 ಸ್ಥಾನಗಳಿದ್ದು, ಸರ್ಕಾರ ರಚಿಸಲು 41 ಸೀಟುಗಳ ಬಹುಮತ ಅಗತ್ಯ. ಜೆಎಂಎಂ 34 ಸ್ಥಾನಗಳನ್ನು ಹೊಂದಿದ್ದು, ಕಾಂಗ್ರೆಸ್‌ನ 16 ಶಾಸಕರು ಹಾಗೂ ಆರ್‌ಜೆಡಿಯ 4, ಸಿಪಿಐ-ಎಂಎಲ್‌ನ 2 ಶಾಸಕರ ಬೆಂಬಲವೂ ಸರ್ಕಾರಕ್ಕೆ ಲಭಿಸಿದೆ. ಇನ್ನೊಂದು ಕಡೆ, ಬಿಜೆಪಿ 21 ಸ್ಥಾನಗಳನ್ನು ಹೊಂದಿದ್ದು, ಎನ್‌ಡಿಎ ಬಣದ ಎಲ್‌ಜೆಪಿ ಮತ್ತು ಜೆಡಿಯುನಿಗೆ ತಲಾ ಒಬ್ಬ ಶಾಸಕರಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




