ಸಮಾಜಮುಖಿಯಾಗಿ ಕೆಲಸ ಮಾಡಿದಾಗ ಪತ್ರಕರ್ತರಿಗೆ ಸಮಾಜವು ಗೌರವ ನೀಡುತ್ತದೆ. ಆಡಳಿತದಲ್ಲಿ ತಪ್ಪುಗಳಾಗಿದಾಗ ತಿದ್ದುವ ಜವಾಬ್ದಾರಿ ಪತ್ರಿಕಾಗಳದ್ದಾಗಿದೆ ಎಂದು ಶಾಸಕ ಹಾಗೂ ರಾಜ್ಯ ಭೂ ಅಭಿವೃದ್ದಿ ಬ್ಯಾಂಕ್ ಅಧ್ಯಕ್ಷ ಕೆ. ಷಡಕ್ಷರಿ ಹೇಳಿದರು.
ಕಲ್ಪತರು ಕ್ರಾಂತಿ ವಾರಪತ್ರಿಕೆಯ 13ನೇ ವಾರ್ಷಿಕೋತ್ಸವ ಹಾಗೂ ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಿಕಾ ಲೋಕ ನಾಲ್ಕನೇ ಅಂಗವಾಗಿ ಪಾರದರ್ಶಕವಾಗಿ ಸತ್ಯದ ಹಾದಿಯಲ್ಲಿ ಸಾಗಬೇಕು. ವಸ್ತುನಿಷ್ಠ ವರದಿ, ಸ್ಥಳೀಯ ಸುದ್ದಿಗಳಿಗೆ ಆದ್ಯತೆ ಮತ್ತು ವೃತ್ತಿಗೌರವ ಕಾಪಾಡಿಕೊಳ್ಳುವುದು ಮುಖ್ಯ ಎಂದರು.
ಷಡಕ್ಷರ ಮಠದ ರುದ್ರಮುನಿ ಮಹಾಸ್ವಾಮೀಜಿ ಮಾತನಾಡಿ, ಪತ್ರಕರ್ತರು ಸಮಾಜದ ದಿಕ್ಕು ತೋರುವ ಬೆಳಕಾಗಬೇಕು, ಭಯದ ವಾತಾವರಣಕ್ಕೆ ಕಾರಣವಾಗಬಾರದು ಎಂದು ಸೂಚಿಸಿದರು. ವೈದ್ಯ ಡಾ. ಶ್ರೀಧರ್, ಪತ್ರಿಕೋದ್ಯಮವು ಇಂದು ಹಲವು ಸವಾಲುಗಳನ್ನು ಎದುರಿಸುತ್ತಿದೆ. ಸಣ್ಣ ಮಾಧ್ಯಮಗಳು ವಸ್ತುನಿಷ್ಠ ವರದಿಗಳ ಮೂಲಕ ಸಮಾಜದಲ್ಲಿ ಬದಲಾವಣೆಗೆ ಕೆಲಸ ಮಾಡಬೇಕು ಎಂದು ಹೇಳಿದರು.
ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್ವರ್, ಪತ್ರಿಕೆಗಳು ನೊಂದವರ ಧ್ವನಿಯಾಗಬೇಕು. ಪತ್ರಕರ್ತರು ತಮ್ಮ ವೈಯಕ್ತಿಕ–ಕುಟುಂಬ ಜೀವನಕ್ಕೂ ಗಮನಕೊಟ್ಟು ಆರ್ಥಿಕವಾಗಿ ಸ್ವಾವಲಂಭಿಗಳಾಗಬೇಕು ಎಂದು ಸಲಹೆ ನೀಡಿದರು. ಹಿರಿಯ ಪತ್ರಕರ್ತ ಎನ್. ಭಾನುಪ್ರಶಾಂತ್, ಪತ್ರಿಕೋದ್ಯಮದ ಘನತೆ ಕಾಪಾಡಿಕೊಳ್ಳಬೇಕು, ಹಣ ಮತ್ತು ಅಧಿಕಾರದ ಆಕರ್ಷಣೆಗೆ ಬಲಿಯಾಗಬಾರದು ಎಂದರು. ಡಾ. ರಕ್ಷಿತ್ ಗೌಡ, ಯಾವ ಸರ್ಕಾರ ಬಂದರೂ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವುದು ಮಾಧ್ಯಮದ ಕರ್ತವ್ಯ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅಶ್ವತ್ ನಾರಾಯಣ್, ಪತ್ರಿಕೆಗಳು ಸಮಾಜಮುಖಿ ಕೆಲಸ ಮುನ್ನಡೆಸಿದಾಗ ಓದುಗರ ವಿಶ್ವಾಸ ಪಡೆಯುತ್ತವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮೋಹನ್ ಕುಮಾರ್, ಇಒ ಸುದರ್ಶನ್, ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಕಲ್ಪತರು ಕ್ರಾಂತಿ ತಂಡದವರು ಭಾಗವಹಿಸಿದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




