ಮಳವಳ್ಳಿ ತಾಲ್ಲೂಕು ವ್ಯವಸಾಯ ಉತ್ಪನ್ನಗಳ ಮಾರಾಟ ಮತ್ತು ರೂಪಾಂತರಗೊಳಿಸುವ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಚುಕ್ಕಾಣಿ ಹಿಡಿದಿದೆ.
ಮುಂದಿನ 5 ವರ್ಷದ ಆಡಳಿತ ಮಂಡಳಿಯ 14 ಸ್ಥಾನಗಳಲ್ಲಿ ಹಲಗೂರು ಕ್ಷೇತ್ರದಿಂದ ಕಾಂಗ್ರೆಸ್‌ನ ಮಾಲಾಶ್ರೀ ಅವಿರೋಧ ಆಯ್ಕೆಯಾಗಿದ್ದಾರೆ. ಉಳಿದ 13 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 8 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇತ್ತ ಬಿಜೆಪಿ-ಜೆಡಿಎಸ್ ಮೈತ್ರಿಕೂಟ 5 ಸ್ಥಾನಗಳನ್ನು ಗೆದ್ದು ಕಳೆದ ಬಾರಿಗಿಂತ ಉತ್ತಮ ಪ್ರದರ್ಶನ ನೀಡಿದೆ.
ಎ ತರಗತಿಯ ಎಲ್ಲ ಆರು ಸ್ಥಾನಗಳಲ್ಲಿ ಕಾಂಗ್ರೆಸ್ ನ ಕೆ.ಜೆ.ದೇವರಾಜು, ಕೆ.ಪಿ.ನರೇಂದ್ರ ಕೆ.ಎಂ.ಪುಟ್ಟು, ಎಂ.ಲಿಂಗರಾಜು, ಬಿ.ಪುಟ್ಟಬಸವಯ್ಯ, ವಿ.ಎನ್.ಮನು ಹಾಗೂ ಎನ್.ಸತೀಶ್ ಗೆಲುವು ಸಾಧಿಸಿದ್ದಾರೆ. ಬಿ ತರಗತಿಯಲ್ಲಿ ಕಾಂಗ್ರೆಸ್ ಬೆಂಬಲಿತ ಎಂ.ಮಾದಯ್ಯ(ಮಲ್ಲು) ಹಾಗೂ ದಿಲೀಪ್ ಕುಮಾರ್(ವಿಶ್ವ) ಗೆಲುವು ಪಡೆದುಕೊಂಡರೆ, ಇತ್ತ ಜೆಡಿಎಸ್-ಬಿಜೆಪಿ ಬೆಂಬಲಿತ ಎಚ್.ವಿ.ಶಿವರುದ್ರಪ್ಪ, ಎನ್.ಶೋಭಾ, ರತ್ನಮ್ಮ, ರಾಮಣ್ಣ ಹಾಗೂ ಶ್ರೀಧರ್ ಗೆದ್ದಿದ್ದಾರೆ.
ಚುನಾವಣಾಧಿಕಾರಿ ತಹಶೀಲ್ದಾರ್ ಎಸ್.ವಿ. ಲೋಕೇಶ್ ಗೆದ್ದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಸಿಪಿಐ ಎಂ. ರವಿಕುಮಾರ್ ಅವರ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿತ್ತು. ಚುನಾವಣೆ ಬಹುತೇಕ ಶಾಂತಿಯುತವಾಗಿ ನಡೆಯಿತು. ಕಾಂಗ್ರೆಸ್ ಪರವಾಗಿ ಮಾತನಾಡಿದ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ. ರಾಜು ಮತ್ತು ಟಿಎಪಿಎಎಂಎಸ್ ಅಧ್ಯಕ್ಷ ಟಿ.ಸಿ. ಚೌಡಯ್ಯ, ಎ ತರಗತಿಯ ಎಲ್ಲಾ 6 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರುವುದು ನಮ್ಮ ಸಂಘಟನೆಯ ಬಲವನ್ನು ತೋರಿಸುತ್ತದೆ ಎಂದರು.
ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ವಿ.ಎಂ. ವಿಶ್ವನಾಥ್ ಹಾಗೂ ಜೆಡಿಎಸ್ ಯುವ ಘಟಕದ ಜಿಲ್ಲಾ ಅಧ್ಯಕ್ಷ ಬಿ. ರವಿ ಕಂಸಾಗರ ಆಕ್ರೋಶ ವ್ಯಕ್ತಪಡಿಸಿ, ಎ ತರಗತಿಯ ಎಲ್ಲ ಸ್ಥಾನಗಳಲ್ಲಿ ಶಾಸಕರು ಪ್ರತಿನಿಧಿಗಳ ಮೇಲೆ ಒತ್ತಡ ಹೇರಿದ್ದು, ಬಿ ತರಗತಿಯಲ್ಲಿ 7 ಸ್ಥಾನಗಳಲ್ಲಿ 5 ಸ್ಥಾನಗಳನ್ನು ನಮ್ಮ ಮೈತ್ರಿಕೂಟ ಗೆದ್ದಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಜನರಿಂದ ತಕ್ಕ ಪಾಠ ಪಡೆಯಲಿದೆ ಎಂದು ವಾಗ್ದಾಳಿ ನಡೆಸಿದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ