ಸುಪ್ರೀಂಕೋರ್ಟಿನ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೂರ್ಯಕಾಂತ್ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಹಿಂದಿನ ಸಿಜೆಐ ಬಿಆರ್ ಗವಾಯಿ ಅವರು ನಿನ್ನೆ ನಿವೃತ್ತರಾಗಿದ್ದಾರೆ. ಅವರ ಸ್ಥಾನಕ್ಕೆ 63 ವರ್ಷದ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರನ್ನ ಆಯ್ಕೆ ಮಾಡಲಾಗಿತ್ತು. ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣ ವಚನ ಬೋಧಿಸಿದ್ರು.
1962ರ ಫೆಬ್ರವರಿ 10ರಂದು ಜನಿಸಿದ ಹರಿಯಾಣ ಮೂಲದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ಹಿಸಾರ್‌ನ ಸಾಮಾನ್ಯ ಕೃಷಿ ಕುಟುಂಬದಿಂದ ಬಂದವರು. ಮಧ್ಯಮ ವರ್ಗದ ಯುವಕನಾಗಿ ಜನಿಸಿದ್ರೂ, ರೋಹ್ಟಕ್‌ನ ಮಹರ್ಷಿ ದಯಾನಂದ್ ವಿವಿಯಲ್ಲಿ ಎಲ್‌ಎಲ್‌ಬಿ ಅಭ್ಯಾಸ ಮಾಡಿದ್ರು. ಜಿಲ್ಲಾ ನ್ಯಾಯಾಲಯದ ವಕೀಲರಾಗಿ ವೃತ್ತಿಜೀವನ ಆರಂಭಿಸಿ, ಇಂದು ದೇಶದ ಅತ್ಯುನ್ನತ ನ್ಯಾಯಾಂಗ ಹುದ್ದೆಯನ್ನು ಏರಿದ್ದಾರೆ.

1984ರಲ್ಲಿ ಕಾನೂನು ವೃತ್ತಿ ಆರಂಭಿಸಿದ್ರು. 2000ರಲ್ಲಿ ಅತೀ ಕಿರಿಯ ಅಡ್ವೊಕೇಟ್ ಜನರಲ್ ಎನ್ನುವ ದಾಖಲೆ ನಿರ್ಮಿಸಿದ್ರು. 2001ರಲ್ಲಿ ಹಿರಿಯ ಅಡ್ವೊಕೇಟ್ ಆದ್ರು. 2004ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಜಡ್ಜ್ ಆಗಿ ಬಡ್ತಿ ಪಡೆದರು.
ನಂತರ, ಹಿಮಾಚಲಪ್ರದೇಶ ಹೈಕೋರ್ಟ್‌ನ ಮುಖ್ಯನ್ಯಾಯಧೀಶರಾದ್ರು. ಅದಾದ ಬಳಿಕ 2019ರಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಆಯ್ಕೆಯಾಗಿದ್ರು. 2024ರಿಂದ ಸರ್ವೋಚ್ಚ ನ್ಯಾಯಾಲಯದ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದರು.

ಸಾಕಷ್ಟು ದಿನಗಳಿಂದ ಬಾಕಿ ಉಳಿದಿರುವ ಪ್ರಕರಣಗಳನ್ನು ಇತ್ಯರ್ಥಗೊಳಿಸುವುದು ಸಿಜೆಐ ಸೂರ್ಯಕಾಂತ್ ಅವರ ಮೊದಲ ಆದ್ಯತೆ. ಪ್ರಮಾಣ ವಚನ ಸ್ವೀಕರಿಸುವ ಮುನ್ನ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಜಿಲ್ಲಾ ಹಾಗು ಕೆಳಗಿನ ನ್ಯಾಯಾಲಯಗಳ ಕಾರ್ಯನಿರ್ವಹಣೆಯಲ್ಲಿ ತೊಡಕುಗಳೇನಿವೆ ಎಂದು ಗುರುತಿಸಲು, ಎಲ್ಲಾ ಹೈಕೋರ್ಟ್‌ಗಳೊಂದಿಗೆ ಸಮಾಲೋಚನೆ ನಡೆಸುವುದಾಗಿ ಹೇಳಿದ್ದಾರೆ.
ದೀರ್ಘಕಾಲದಿಂದ ಇತ್ಯರ್ಥವಾಗದೆ ಉಳಿದಿರುವ ಪ್ರಕರಣಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು, ಸಾಂವಿಧಾನಿಕ ಪೀಠಗಳನ್ನು ಸದ್ಯದಲ್ಲೇ ರಚಿಸಲಿದ್ದೇವೆ. ಐದು ಸದಸ್ಯರ ಪೀಠ, ಏಳು ಮತ್ತು ಒಂಬತ್ತು ಸದಸ್ಯರ ಸಾಂವಿಧಾನಿಕ ಪೀಠಗಳನ್ನು, ಮುಂದಿನ ಕೆಲ ವಾರಗಳಲ್ಲಿ ರಚಿಸುವುದಾಗಿ ಹೇಳಿದ್ರು.
ಇನ್ನು, ಮುಖ್ಯನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಅವರು, ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ವಾಪಸ್ ಪಡೆಯುವ, 370ನೇ ವಿಧಿಯನ್ನು ರದ್ದುಪಡಿಸುವುದು ಸೇರಿದಂತೆ, ಹಲವು ಮಹತ್ವದ ತೀರ್ಪುಗಳ ಭಾಗವಾಗಿದ್ದಾರೆ.

