Friday, October 24, 2025

Latest Posts

ಮೈಮುಲ್ ಅಧ್ಯಕ್ಷರಾಗಿ ಕೆ. ಈರೇಗೌಡ : ಎಚ್.ಡಿ. ಕೋಟೆಗೆ ಮೊದಲ ಬಾರಿ ಗೌರವ!

- Advertisement -

ಮೈಮುಲ್‌ — ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ, ಇದರ ನೂತನ ಅಧ್ಯಕ್ಷರಾಗಿ ಕೆ. ಈರೇಗೌಡ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಇದರೊಂದಿಗೆ, ಈ ಹುದ್ದೆ ಮೊದಲ ಬಾರಿಗೆ ಎಚ್.ಡಿ. ಕೋಟೆ ತಾಲ್ಲೂಕಿಗೆ ಸಂದಿದೆ. ಬನ್ನೂರು ರಸ್ತೆಯ ಮೆಗಾ ಡೈರಿಯ ಆಡಳಿತ ಮಂಡಳಿ ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಒಂದೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದ, ಚುನಾವಣಾಧಿಕಾರಿಯಾಗಿದ್ದ ಲೆಕ್ಕಪರಿಶೋಧನಾ ಜಂಟಿ ನಿರ್ದೇಶಕ ಶ್ರೀಧರ್ ಅವರು ಈರೇಗೌಡ ಅವರ ಅವಿರೋಧ ಆಯ್ಕೆಯನ್ನು ಘೋಷಿಸಿದರು. ಈ ಸ್ಥಾನ ತಿ. ನರಸೀಪುರದ ಆರ್. ಚೆಲುವರಾಜು ರಾಜೀನಾಮೆಯಿಂದ ತೆರವಾಗಿತ್ತು.

ಕಾಂಗ್ರೆಸ್ ಬೆಂಬಲಿತ ನಿರ್ದೇಶಕರ ಮಧ್ಯೆ ನಡೆದ ಅಧಿಕಾರ ಹಂಚಿಕೆ ಸೂತ್ರದ ಪ್ರಕಾರ ಅವಿರೋಧ ಆಯ್ಕೆ ಸುಗಮವಾಗಿ ನೆರವೇರಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಲಹೆಯ ಮೇರೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಸಿ. ಮಹದೇವಪ್ಪ ಅವರು ನಿರ್ದೇಶಕರ ಸಭೆ ನಡೆಸಿ ಈರೇಗೌಡರಿಗೆ ಬೆಂಬಲ ನೀಡುವಂತೆ ಸೂಚಿಸಿದ್ದರು. ತಮ್ಮ ತಾಲ್ಲೂಕಿನ ನಿರ್ದೇಶಕರಿಗೆ ಈ ಸ್ಥಾನ ದೊರಕಿಸಿಕೊಡುವ ನಿಟ್ಟಿನಲ್ಲಿ ಶಾಸಕ ಅನಿಲ್ ಚಿಕ್ಕಮಾದು ಪ್ರಮುಖ ಪಾತ್ರವಹಿಸಿದ್ದಾರೆಯೆಂದು ತಿಳಿದುಬಂದಿದೆ.

ಚುನಾವಣಾ ಪ್ರಕ್ರಿಯೆಗೆ ಎಲ್ಲ ನಿರ್ದೇಶಕರೂ ಹಾಜರಿದ್ದುದು ಗಮನಸೆಳೆಯಿತು. ಆಯ್ಕೆ ಘೋಷಣೆಯಾದ ತಕ್ಷಣ, ಸಭಾಂಗಣದ ಹೊರಗೆ ನೂರಾರು ಅಭಿಮಾನಿಗಳು ಸೇರಿ ವಿಜಯೋತ್ಸವ ಆಚರಿಸಿದರು. ಎಚ್‌.ಡಿ. ಕೋಟೆ ತಾಲ್ಲೂಕಿನ ವಿವಿಧ ಹಳ್ಳಿಗಳಿಂದ ಆಗಮಿಸಿದ ಮುಖಂಡರು ಹಾಗೂ ಕಾರ್ಯಕರ್ತರು ಈರೇಗೌಡರನ್ನು ಹಾರ್ದಿಕವಾಗಿ ಅಭಿನಂದಿಸಿದರು. ನೂತನ ಅಧ್ಯಕ್ಷರ ಅಧಿಕಾರಾವಧಿ ಮುಂದಿನ ವರ್ಷದ ಮಾರ್ಚ್ ಅಂತ್ಯದವರೆಗೆ ಇರುತ್ತದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss