ಕೆ.ಆರ್. ನಗರ ಮಹಿಳೆಯ ಅಪಹರಣ ಪ್ರಕರಣದಲ್ಲಿ ಆರೋಪಿಯಾಗಿರುವ ಭವಾನಿ ರೇವಣ್ಣಗೆ ವಿಧಿಸಿದ್ದ ಜಾಮೀನಿನ ಷರತ್ತು ಸಡಿಲಿಕೆ ಮಾಡಿರುವ ಕರ್ನಾಟಕ ಹೈಕೋರ್ಟ್, ಅವರಿಗೆ 15 ದಿನಗಳ ಕಾಲ ಹಾಸನ, ಮೈಸೂರಿಗೆ ಭೇಟಿ ನೀಡಲು ಅನುಮತಿ ನೀಡಿದೆ. ಷರತ್ತು ಸಡಿಲಗೊಳಿಸುವಂತೆ ಕೋರಿ ಭವಾನಿ ರೇವಣ್ಣ ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಗುರುವಾರ ಈ ಆದೇಶ ನೀಡಿದೆ.
ಈ ಹಿಂದೆ ಜೂನ್ 7ರಂದು ನ್ಯಾಯಾಲಯ ಜಾಮೀನು ನೀಡುವಾಗ ಭವಾನಿ ಅವರು ಹಾಸನ ಹಾಗೂ ಮೈಸೂರು ಜಿಲ್ಲೆಗಳಿಗೆ ಭೇಟಿ ನೀಡದಂತೆ ನಿರ್ಬಂಧ ವಿಧಿಸಿತ್ತು. ಇದೀಗ 15 ದಿನಗಳ ಕಾಲ ಹಾಸನ, ಮೈಸೂರು ಜಿಲ್ಲೆಗೆ ಭೇಟಿ ನೀಡಲು ಅವಕಾಶ ನೀಡಿದೆ. ಆದರೆ, ಸಾಕ್ಷಿಗಳ ಭೇಟಿ ಸೇರಿದಂತೆ ಇತರೆ ಜಾಮೀನು ಷರತ್ತು ಉಲ್ಲಂಘಿಸಬಾರದು. ಉಲ್ಲಂಘಿಸಿದರೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ನ್ಯಾಯಪೀಠ ಎಚ್ಚರಿಕೆ ನೀಡಿದೆ.
ಭವಾನಿ ರೇವಣ್ಣ ಪರ ವಾದ ಮಂಡಿಸಿದ ವಕೀಲರು, ”ಪ್ರಕರಣದ ಇತರೆ ಯಾವುದೇ ಆರೋಪಿಗಳಿಗೆ ಇಂತಹ ಷರತ್ತು ವಿಧಿಸಿಲ್ಲ. ಹಾಗಾಗಿ, ಅರ್ಜಿದಾರರಿಗೆ ವಿಧಿಸಿರುವ ಷರತ್ತು ಸಡಿಲ ಮಾಡಬೇಕು. ಮೂಲತಃ ಅವರು ಹಾಸನ ಜಿಲ್ಲೆಯ ವಾಸಿಯಾಗಿದ್ದು, ಅಲ್ಲಿಗೆ ತೆರಳಬೇಕಾಗುತ್ತದೆ,” ಎಂದು ಹೇಳಿದರು. ತಮ್ಮ ಮನೆಯಲ್ಲಿಯೇ ಕೆಲಸ ಮಾಡಿಕೊಂಡಿದ್ದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣ ಆರೋಪ ಎದುರಿಸುತ್ತಿದ್ದಾರೆ. ಈ ಕುರಿತು ಮಾರ್ಚ್ 2ರಂದು ಕೆ.ಆರ್. ನಗರದಲ್ಲಿ ದೂರು ದಾಖಲಾಗಿತ್ತು.