Friday, October 24, 2025

Latest Posts

ಕಬಿನಿ ಜಲಾಶಯ ಹೊಸ ದಾಖಲೆ : ಒಂದೇ ವರ್ಷದಲ್ಲಿ 5ನೇ ಬಾರಿ ಭರ್ತಿ

- Advertisement -

ದಕ್ಷಿಣ ಕರ್ನಾಟಕದ ಬೆಂಗಳೂರು, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಈ ಬಾರಿ ಉತ್ತಮ ಮಳೆಯಾಗಿರುವುದರಿಂದ, ಎಚ್‌.ಡಿ. ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದ ಕಬಿನಿ ಜಲಾಶಯವು ಪ್ರಸಕ್ತ ಸಾಲಿನಲ್ಲಿ ಐದನೇ ಬಾರಿಗೆ ಸಂಪೂರ್ಣ ಭರ್ತಿಯಾಗುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ಕಳೆದ ಆರು ತಿಂಗಳಿಂದ ನಿರಂತರವಾಗಿ ತುಂಬಿಕೊಂಡಿರುವ ಈ ಜಲಾಶಯದಿಂದ ಮುಂದಿನ ಬೇಸಿಗೆಯವರೆಗೂ ಮೈಸೂರು ಹಾಗೂ ಬೆಂಗಳೂರು ಸೇರಿದಂತೆ ಹಲವಾರು ನಗರಗಳಿಗೆ ಕುಡಿಯುವ ನೀರಿನ ತೊಂದರೆ ಇರುವ ಸಾಧ್ಯತೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಬಿನಿ ಜಲಾಶಯದ 50 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೇ ತಿಂಗಳಲ್ಲೇ ಅದು ಭರ್ತಿಯಾಗಿತ್ತು. ಬಳಿಕ ಮುಂಗಾರು ಆರಂಭವಾದ ಜೂನ್, ಜುಲೈ, ಆಗಸ್ಟ್ ತಿಂಗಳುಗಳ ಜೊತೆಗೆ ಈಗ ಅಕ್ಟೋಬರ್ ಅಂತ್ಯದಲ್ಲಿಯೂ ಮತ್ತೆ ಗರಿಷ್ಠ ಮಟ್ಟ ತಲುಪಿದೆ. ಕಳೆದ 25 ವರ್ಷಗಳಲ್ಲಿ ಸತತವಾಗಿ ಆರು ತಿಂಗಳು ಪೂರ್ಣ ಸಾಮರ್ಥ್ಯದಲ್ಲಿ ಜಲಾಶಯ ತುಂಬಿರುವುದು ಇದೇ ಮೊದಲು. ಈ ವರ್ಷ ಕೆರೆಕಟ್ಟೆಗಳಿಗೆ ಸಹ ನೀರು ಹರಿಸಲಾಗಿದ್ದು, ಇನ್ನೂ ಎರಡು–ಮೂರು ತಿಂಗಳು ಇದೇ ಮಟ್ಟದ ನೀರಿನ ಸಂಗ್ರಹ ಮುಂದುವರಿಯುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಲಾಶಯದ ಗರಿಷ್ಠ ಮಟ್ಟ 2284 ಅಡಿ ಆಗಿದ್ದು, ಕಳೆದ ಮೂರು ದಿನಗಳ ಹಿಂದೆ ಕೇವಲ 500 ಕ್ಯೂಸೆಕ್ ಇದ್ದ ಒಳಹರಿವು ಇಂದು 6100 ಕ್ಯೂಸೆಕ್‌ಗೆ ಏರಿಕೆಯಾಗಿದೆ. ಒಳಹರಿವಿನ ಪ್ರಮಾಣಕ್ಕೆ ಅನುಗುಣವಾಗಿ ನೀರನ್ನು ಹೊರಹರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಬಿನಿ ಜಲಾಶಯವು ಮುಂದಿನ ಬೇಸಿಗೆಯವರೆಗೂ ಭರ್ತಿಯಾಗಿರುವ ಸಾಧ್ಯತೆ ಇರುವುದರಿಂದ, ನಂಜನಗೂಡು, ಎಚ್‌.ಡಿ. ಕೋಟೆ, ತಿ. ನರಸೀಪುರ, ಮೈಸೂರು ಮತ್ತು ಬೆಂಗಳೂರು ನಗರಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುವುದಿಲ್ಲ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss