ಜುಲೈ ೭ ರಂದು ಬಿಡುಗಡೆಯಾದ ಮಲಯಾಳಂನ ಕಡುವ ಚಿತ್ರವು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ವಿವಾದಕ್ಕಿಡಾಗಿದೆ. ಚಿತ್ರದಲ್ಲಿ ಅಂಗವಿಕಲರು ಮತ್ತು ಅವರ ಪೋಷಕರ ಕುರಿತು ಅನುಚಿತಸಂಭಾಷಣೆಗಳಿವೆ ಎನ್ನಲಾಗುತ್ತಿದ್ದು, ಈಗಾಗಲೇ ಚಿತ್ರದ ನಾಯಕ ಪೃಥ್ವಿರಾಜ್ ಸುಕುಮಾರನ್ ಮತ್ತು ನಿರ್ದೇಶಕ ಶಾಜಿ ಕೈಲಾಸ್ ಕ್ಷಮೆಯಾಚಿಸಿದ್ದಾರೆ. ಪೃಥ್ವಿರಾಜ್ ನಾಯಕನಾಗಿ ನಟಿಸಿರುವ ಈ ಸಿನಿಮಾದ ಒಂದು ದೃಶ್ಯದಲ್ಲಿ, ಅಂಗವಿಕಲರು ಮತ್ತು ಅವರ ಪೋಷಕರ ವಿರುದ್ಧ ಅನುಚಿತ ಸಂಭಾಷಣೆಗಳು ಇರುವುದು ಕಂಡು ಬಂದಿದೆ.
ಚಲನಚಿತ್ರದ ಡೈಲಾಗ್ಸ್ಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ರೋಶ ವ್ಯಕ್ತವಾಗಿದ್ದು, ಬೌದ್ಧಿಕ ಮತ್ತು ಬೆಳವಣಿಗೆಯಲ್ಲಿ ಅಸಮರ್ಥತೆ ಹೊಂದಿರುವ ಮಕ್ಕಳ ಪೋಷಕರ ಸಂಘ ಪರಿವಾರವು ರಾಜ್ಯ ಅಂಗವಿಕಲರ ಆಯೋಗದ ಮೊರೆ ಹೋಗಿದೆ. ಅವಹೇಳನಕಾರಿ ಸಂಭಾಷಣೆಗಳಿಗೆ ವಿವರಣೆ ಕೋರಿ ಚಿತ್ರ ನಿರ್ಮಾಪಕ ಕೈಲಾಸ್ ಮತ್ತು ನಿರ್ಮಾಪಕರಾದ ಸುಪ್ರಿಯಾ ಮೆನನ್ ಮತ್ತು ಲಿಸ್ಟಿನ್ ಸ್ಟೀಫನ್ ಅವರಿಗೆ ರಾಜ್ಯ ಅಂಗವಿಕಲರ ಆಯೋಗದ ಆಯುಕ್ತರು ನೋಟಿಸ್ ಜಾರಿ ಮಾಡಿದ್ದಾರೆ.
ವಿವಾದದ ಹಿನ್ನೆಲೆಯಲ್ಲಿ ನಿರ್ದೇಶಕ ಕೈಲಾಸ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಪ್ರಕಟಿಸಿದ್ದು, ಹೃದಯಪೂರ್ವಕವಾಗಿ ಕ್ಷಮೆಯಾಚಿಸುವುದಾಗಿ ಹೇಳಿದ್ದಾರೆ. ನನ್ನ ನಿರ್ದೇಶನದ ಕಡುವ ಚಿತ್ರದಲ್ಲಿ ಅಂಗವಿಕಲ ಮಕ್ಕಳ ಪೋಷಕರಿಗೆ ನೋವುಂಟು ಮಾಡುವ ಸಂಭಾಷಣೆ ಇರುವುದಕ್ಕಾಗಿ ನಾನು ಹೃದಯಪೂರ್ವಕವಾಗಿ ಕ್ಷಮೆಯಾಚಿಸುತ್ತೇನೆ. ಚಿತ್ರದಲ್ಲಿನ ಆ ಸಂಭಾಷಣೆ ತಪ್ಪಾಗಿದೆ. ಎಲ್ಲರೂ ನನ್ನನ್ನು ಕ್ಷಮಿಸಬೇಕೆಂದು ಕೋರುತ್ತೇನೆ. ಸಂಭಾಷಣೆ ಬರೆದಿರುವ ಚಿತ್ರಕಥೆಗಾರ ಜಿನು ಅಥವಾ ನಟ ಪೃಥ್ವಿರಾಜ್ ಅಥವಾ ದೃಶ್ಯವನ್ನು ಚಿತ್ರೀಕರಿಸಿದ ನಾನು ಅದರ ಸಂಭವನೀಯ ಅರ್ಥವನ್ನು ಅರಿತುಕೊಂಡಿಲ್ಲ ಎಂದು ಕೈಲಾಸ್ ಬರೆದುಕೊಂಡಿದ್ದಾರೆ.
ಕೈಲಾಸ್ ಅವರ ಪೋಸ್ಟ್ ಅನ್ನು ಹಂಚಿಕೊಂಡ ಪೃಥ್ವಿರಾಜ್, ಕ್ಷಮಿಸಿ. ತಪ್ಪಾಗಿದೆ. ನಾವು ಅದನ್ನು ಒಪ್ಪಿಕೊಳ್ಳುತ್ತೇವೆ ಎಂದು ಬರೆದಿದ್ದಾರೆ.