ಕನ್ನಡ ಚಿತ್ರರಂಗ ಶೈನ್ ಆಗಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತಾಗಿದೆ ಅನ್ನೋದು ಎಲ್ಲರಿಗೂ ಗೊತ್ತು. ಅಂತೆಯೇ ಕನ್ನಡದ ಅನೇಕರು ಪರಭಾಷೆಯಲ್ಲೂ ಮಿಂಚುತ್ತಿರೋದು ಗೊತ್ತೇ ಇದೆ. ಇಲ್ಲಿ ಮಿಂದೆದ್ದ ನಟಿಯರು ಟಾಲಿವುಡ್, ಕಾಲಿವುಡ್ ಅಷ್ಟೇ ಯಾಕೆ ಬಾಲಿವುಡ್ ನಲ್ಲೂ ಮಿಂಚುತ್ತಿದ್ದಾರೆ. ಆ ಸಾಲಿಗೆ ಇದೀಗ ಕನ್ನಡದ ಮತ್ತೊಬ್ಬ ನಟಿಯ ಅಬ್ಬರ ಮುಂದುವರೆದಿದೆ.
ಹೌದು, ಅಪ್ಪಟ ಕನ್ನಡದ ನಟಿ ರುಕ್ಮಿಣಿ ವಸಂತ್ ನೋಡ ನೋಡುತ್ತಿದ್ದಂತೆಯೇ ಭಾರತೀಯ ಚಿತ್ರರಂಗವನ್ನೇ ಆವರಿಸಿಕೊಂಡರು. ಕಾಂತಾರ -1 ಬಳಿಕ ರುಕ್ಮಿಣಿ ಅವರಿಗೆ ಫುಲ್ ಡಿಮ್ಯಾಂಡ್ ಬಂದಿದೆ. ನಟನೆ ಮೂಲಕ ಜನಪ್ರಿಯತೆ ಪಡೆದುಕೊಂಡ ರುಕ್ಮಿಣಿ ವಸಂತ್, ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು. ಬಾಲಿವುಡ್ ಅಂಗಳಕ್ಕೂ ಜಿಗಿದರು. ಸದ್ಯ ತೆಲುಗು ಚಿತ್ರರಂಗದ ಅಕ್ಕಿನೇನಿ ನಾಗ ಚೈತನ್ಯ ಅವರ ಹೊಸ ಚಿತ್ರದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಸಕ್ಸಸ್ ಬಳಿಕ ರುಕ್ಮಿಣಿ ವಸಂತ್ ಪರಭಾಷೆಯಲ್ಲಿ ತಮ್ಮ ಬೇಡಿಕೆ ಹೆಚ್ಚಿಸಿಕೊಂಡಿರುವುದು ಸುಳ್ಳಲ್ಲ. ಸದ್ಯ ನಾಗ ಚೈತನ್ಯ ಅವರ ಜೊತೆಗಿನ ಸಿನಿಮಾದ ಚಿತ್ರೀಕರಣ ಶೀಘ್ರವೇ ಶುರುವಾಗಲಿದೆ.
ಸೂಕ್ಷ್ಮವಾಗಿ ಗಮನಿಸಿದರೆ, ಪರಭಾಷೆ ಸಿನಿಮಾಗಳಲ್ಲಿ ಕನ್ನಡದ ಬೆರಳೆಣಿಕೆ ನಟಿಮಣಿಗಳು ಕಾಣಿಸಿಕೊಳ್ಳುತ್ತಿದ್ದಾರೆ. ಇಲ್ಲಿ ಸಕ್ಸಸ್ ಪಡೆದ ನಟಿಯರನ್ನ ಪರಭಾಷೆ ಚಿತ್ರರಂಗ ಕೈ ಬೀಸಿ ಕರೆಯುವುದು ಸಹಜ. ಅಂತೆಯೇ, ಇಲ್ಲಿ ಗೆದ್ದಿರುವ ಅನೇಕ ನಟಿಮಣಿಗಳು ಪರಭಾಷೆಯ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಆ ಸಾಲಿಗೆ ಇದೀಗ ರುಕ್ಮಿಣಿ ವಸಂತ್ ಕೂಡ ಸೇರಿದ್ದಾರೆ. ಅಂದಹಾಗೆ, ನಾಗ ಚೈತನ್ಯ ಯಾವುದೇ ಸಿನಿಮಾ ಇರಲಿ, ಅಲ್ಲಿ ಕಥೆ ಆಯ್ಕೆಯಲ್ಲಿ ತುಂಬಾನೇ ಎಚ್ಚರಿಕೆ ವಹಿಸುತ್ತಾರೆ. ಅವರ ಈ ಹಿಂದಿನ ಮಜಿಲಿ, ಲವ್ ಸ್ಟೋರಿ, ಮತ್ತು ಥಂಡೇಲ್ ಈ ಚಿತ್ರಗಳ ಮೂಲಕ ಪ್ರೇಕ್ಷಕರಿಂದ ಸೈ ಎನಿಸಿಕೊಂಡಿದ್ದಾರೆ. ಒಂದು ಚಿತ್ರದಿಂದ ಮತ್ತೊಂದು ಚಿತ್ರಕ್ಕೆ ಹೊಸತನ್ನು ಕೊಡುವ ಮೂಲಕ ಮನರಂಜನೆ ನೀಡುತ್ತಲೇ ಬಂದಿದ್ದಾರೆ. ‘ಥಂಡೇಲ್’ ಚಿತ್ರದಲ್ಲಿ ನಾಗ ಚೈತನ್ಯ ಅವರ ನಟನೆ ಬಗ್ಗೆ ಒಳ್ಳೆಯ ಮೆಚ್ಚುಗೆಯ ಮಾತುಗಳು ಕೇಳಿ ಬಂದಿವೆ. ಆ ಸಿನಿಮಾದಲ್ಲಿ ಅವರು ಮೀನುಗಾರನಾಗಿ ಅದ್ಭುತವಾಗಿ ಕಾಣಿಸಿಕೊಂಡಿದ್ದರು. ಸದ್ಯ ರುಕ್ಮಿಣಿ ವಸಂತ್ ಮತ್ತು ನಾಗ ಚೈತನ್ಯ ಅಭಿನಯದ ಹೊಸ ಚಿತ್ರಕ್ಕೆ ಕ್ಲಾಕ್ಸ್ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿದೆ.
ಅಂದಹಾಗೆ, ಕ್ಲಾಕ್ಸ್ ಈ ಹಿಂದೆ ‘ಬೇದೂರು ಲಂಕಾ 2012 ’ ಚಿತ್ರ ನಿರ್ದೇಶಿಸಿದ್ದರು. ಈ ಯುವ ನಿರ್ದೇಶಕ ಈಗ ನಾಗ ಚೈತನ್ಯ ಅವರೊಂದಿಗೆ ಸಿನಿಮಾ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಇದೊಂದು ಸುಂದರ ಪ್ರೇಮಕಥೆಯಾಗಿದ್ದು, ರುಕ್ಮಿಣಿ ವಸಂತ್ ಅವರು ನಾಗ ಚೈತನ್ಯ ಅವರಿಗೆ ನಾಯಕಿಯಾಗಿದ್ದಾರೆ. ಉಳಿದಂತೆ ಸಿನಿಮಾದಲ್ಲಿ ಯಾರೆಲ್ಲ ಇರಲಿದ್ದಾರೆ ಅನ್ನುವುದಕ್ಕಿನ್ನೂ ಸಮಯವಿದೆ. ಕನ್ನಡದ ರುಕ್ಮಿಣಿ ವಸಂತ್ ಅವರಿಗೆ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲೂ ಒಳ್ಳೆಯ ಕ್ರೇಜ್ ಇದೆ. ಇಲ್ಲಿಯವರೆಗೆ ತೆಲುಗಿನಲ್ಲಿ ಯಾವುದೇ ಸಿನಿಮಾ ಮಾಡಿಲ್ಲದಿದ್ದರೂ, ಡಬ್ಬಿಂಗ್ ಚಿತ್ರಗಳ ಮೂಲಕ ಮೋಡಿ ಮಾಡಿದ್ದಾರೆ. ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ತೆಲುಗು ಅವತರಣಿಕೆ ಆ ಭಾಗದಲ್ಲಿ ಗಮನ ಸೆಳೆದಿತ್ತು. ಇನ್ನು, ರುಕ್ಮಿಣಿ ಜೂನಿಯರ್ ಎನ್ಟಿಆರ್ ನಟನೆಯ ಡ್ರ್ಯಾಗನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಅಕ್ಕಿನೇನಿ ನಾಗ ಚೈತನ್ಯ ಎದುರು ನಟಿಸುವ ಅವಕಾಶ ಪಡೆದಿದ್ದಾರೆ ಅನ್ನೋ ಮಾತುಗಳಿಗೀಗ ರೆಕ್ಕೆಪುಕ್ಕ ಹೆಚ್ಚಾಗಿದೆ.
ಕನ್ನಡದ ಸಕ್ಸಸ್ ಫುಲ್ ನಟಿಯರೆಲ್ಲ ಪರಭಾಷೆಯತ್ತ ದಾಪುಗಾಲು ಇಡುತ್ತಿದ್ದಾರೆ. ಇಲ್ಲಿ ಮಿಂದೆದ್ದವರು ಅಲ್ಲೂ ಮಿಂದೇಳಲು ಅಣಿಯಾಗುತ್ತಿದ್ದಾರೆ. ಕನ್ನಡದಿಂದ ಈಗಾಗಲೇ ಒಂದಷ್ಟು ನಟಿಯರು ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ನಟಿಸಲಿ, ಆದರೆ, ಕನ್ನಡತನ ಮತ್ತು ಕನ್ನಡದಿಂದ ಬೆಳೆದು ಹೋದ ಹಾದಿಯನ್ನು ಮರೆಯದಿರಲಿ ಅನ್ನೋದು ನಮ್ಮ ಆಶಯ.




